ಬಿಎಂಐಪಿ ಸೂಲ್‌ನಲ್ಲಿ ಶಿಕ್ಷಕರ ದಿನಾಚರಣೆ ಸಂಭ್ರಮ

6 HVR 8
Published on

ಹಾವೇರಿ: ಇಲ್ಲಿನ ಹಾವೇರಿ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ದೇವಗಿರಿ ಕ್ರಾಸ್‌ನ ಬಿ.ಎಂ. ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಗುರುವಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 136ನೇ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.
ಶಾಲೆಯ ಮಕ್ಕಳು ಶಿಕ್ಷಕರಿಗಾಗಿ ಹಲವು ಸ್ಪರ್ಧೆ, ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಮ್ಯೂಸಿಕಲ್ ಚೇರ್, ಗಾಯನ ಸ್ಪರ್ಧೆ, ಟ್ರಿಸರ್ ಹಂಟ್ ಆಟಗಳಲ್ಲಿ ಪಾಲ್ಗೊಂಡು ಶಿಕ್ಷಕರು ಪುಳಕಿತರಾದರು. ಗುರುದೇವೋ ಭವ ಎಂಬ ನಾಣ್ಣುಡಿಗೆ ಅನುಗುಣವಾಗಿ ಪ್ರಾರ್ಥನಾ ಸಭೆಯನ್ನು ವಿದ್ಯಾರ್ಥಿಗಳೇ ನಡೆಸಿಕೊಟ್ಟರು. ನಂತರ ಕೇಕ್ ಕತ್ತರಿಸಿ ಎಲ್ಲ ಶಿಕ್ಷಕರಿಗೂ ತಿನ್ನಿಸುವ ಮೂಲಕ ಸಂಭ್ರಮ ಪಟ್ಟರು. ಶಿಕ್ಷಕರಿಗೆ ಉಡುಗೊರೆ ನೀಡಿ ಗೌರವಿಸಿದರು.
ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ನಾಗರಾಜ ಮಾತನಾಡಿ, ಶಿಕ್ಷಕ ವೃತ್ತಿ ನಮ್ಮ ಆಯ್ಕೆಯಾಗಿ ತನ್ನಿಚ್ಛೆಯಂತೆ ಪ್ರಥಮ ಆದ್ಯತೆಯಾಗಿರಬೇಕು. ಶಿಕ್ಷಕರು ತಾವು ಕಲಿಸುವ ವಿಷಯದ ಆಳವನ್ನು ಸರಿಯಾಗಿ ತಿಳಿದುಕೊಂಡು ಸರಿಯಾದ ಸಮಯದಲ್ಲಿ ಮಕ್ಕಳಿಗೆ ತಿಳಿಸಬೇಕು. ಅಲ್ಲದೇ ತರಗತಿಗೆ ಹೋಗುವ ಮುನ್ನ ಸರಿಯಾದ ತಯಾರಿ ಮಾಡಿಕೊಂಡಿರಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಮಾತನಾಡಿ, ಇಂದಿನ ವಿದ್ಯಾರ್ಥಿ ನಾಳಿನ ಪ್ರಜೆಯಲ್ಲ, ಇಂದಿನ ವಿದ್ಯಾರ್ಥಿ ಇಂದಿನ ಪ್ರಜೆಯೇ. ಹಾಗಾಗಿ, ಈ ಸಮಾಜದ ಹಾಗೂ ದೇಶದ ಹಿರಿಮೆ ಗರಿಮೆಯನ್ನು ಕಾಪಾಡುವ ಹೊಣೆ ವಿಧ್ಯಾರ್ಥಿಗಳದ್ದಾಗಿದೆ ಎಂದರು.
ಪ್ರಾಂಶುಪಾಲ ಎಂ.ಗಣೇಶ ಹಾಗೂ ಶಿಕ್ಷಕ- ಶಿಕ್ಷಕಿಯರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಕೆಲ ವಿದ್ಯಾರ್ಥಿಗಳು ಶಿಕ್ಷಕರ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net