

ಹಾವೇರಿ: ಇಲ್ಲಿನ ದೇವಗಿರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಿಎಂ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ ಮಕ್ಕಳು ಸೊಪ್ಪು, ತರಕಾರಿ ಮಾರಾಟ ಮಾಡಿ ಗಮನ ಸೆಳೆದರು.
ಮಾರುಕಟ್ಟೆ ಕಾರ್ಯಕ್ರಮದ ಅಡಿಯಲ್ಲಿ 1ರಿಂದ 6ನೇ ತರಗತಿ ಮಕ್ಕಳಿಂದ ಶಾಲೆಯ ಆವರಣದಲ್ಲಿ ತಾತ್ಕಾಲಿಕವಾಗಿ ಮಾರುಕಟ್ಟೆಯೇ ನಿರ್ಮಾಣವಾಗಿತ್ತು. ಮಕ್ಕಳು ವಿವಿಧ ರೀತಿಯ ಸೊಪ್ಪು, ತರಕಾರಿ, ಹಣ್ಣು, ಕಿರಾಣಿ ಸಾಮಾನುಗಳನ್ನು ಪ್ರಾಯೋಗಿಕವಾಗಿ ಮಾರಾಟ ಮಾಡಿದರು. ತಮ್ಮ ಮನೆಯಿಂದ ತಂದಿದ್ದ ವಸ್ತುಗಳನ್ನು ಶಾಲಾ ಸಿಬ್ಬಂದಿ ಹಾಗೂ ಪಾಲಕರಿಗೆ ಮಾರಾಟ ಮಾಡಿದರು.
ದೇವಿಹೊಸೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಮುದಿಗೌಡ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಾಥಮಿಕ ಹಂತದಲ್ಲೇ ವಿಧ್ಯಾರ್ಥಿಗಳ ಜಾಣ್ಮೆ ಹಾಗೂ ವ್ಯವಹಾರಿಕ ಜ್ಞಾನವನ್ನು ಗುರುತಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.
ಶಾಲೆಯ ಪ್ರಾಂಶುಪಾಲ ಗಣೇಶ ಎಂ., ಪಾಲಕರು, ಶಿಕ್ಷಕರು ಮತ್ತು ಭೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.