ಜಮೀರ್‌ನ ನಂಬಿದರೆ ಸಿಎಂ ಕುತ್ತಿಗೆಯನ್ನೂ ಉಳಿಸಲ್ಲ; ಮಾಜಿ ಸಚಿವ ಸಿ.ಟಿ.ರವಿ

BJP CT Ravi
Published on

ಹಾವೇರಿ: ವಕ್ಫ್ ಹೆಸರಲ್ಲಿ ಸಚಿವ ಜಮೀರ್ ಅಹ್ಮದ್ ಮೂಲಕ ರಾಜ್ಯದ ನೆಮ್ಮದಿಗೆ ಕೊಳ್ಳಿ ಇಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿಸುತ್ತಿದೆ. ಹೈದರಾಲಿ ನಂಬಿ ಮಹಾರಾಣಿ ಲಕ್ಷ್ಮಮ್ಮಣ್ಣಿ ಜೈಲು ಪಾಲಾದಂಥ ಪರಿಸ್ಥಿತಿ ಕಾಂಗ್ರೆಸ್ ಸರ್ಕಾರಕ್ಕೆ ಬರುತ್ತದೆ. ಜಮೀರ್‌ನ ನಂಬಿದರೆ ಒಂದು ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುತ್ತಿಗೆಯನ್ನೂ ಅವರು ಉಳಿಸಲ್ಲ ಎಂದು ಬಿಜೆಪಿಯ ನಮ್ಮ ಭೂಮಿ ನಮ್ಮ ಹಕ್ಕು ತಂಡದ ಸದಸ್ಯ, ಮಾಜಿ ಸಚಿವ ಸಿ.ಟಿ.ರವಿ ಹರಿಹಾಯ್ದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಮತಾಂಧರು ವಿಧಾನಸೌಧವೂ ನಮ್ಮದು ಅಂತಾರೆ. ವಕ್ಫ್ ಹೆಸರಲ್ಲಿ ರಾಜ್ಯದ 90 ಸಾವಿರ ಎಕರೆ ಜಮೀನನ್ನು ಕಬಳಿಸಲು ರಾಜ್ಯ ಸರ್ಕಾರ ಸಂಚು ರೂಪಿಸಿದೆ. ಹೀಗೆಯೇ ಮುಂದುವರಿದರೆ ಬಾಂಗ್ಲಾದೇಶದಲ್ಲಿ ಹಿಂದುಗಳಿಗೆ ಆದ ಪರಿಸ್ಥಿತಿ ಭಾರತದ ಹಿಂದುಗಳಿಗೂ ಬರಬಹುದು. ಇದರ ವಿರುದ್ಧ ವಿಧಾನಸಭೆ ಒಳಗೆ, ಹೊರಗೆ ಹೋರಾಡುತ್ತೇವೆ ಎಂದರು.

ಯತ್ನಾಳ ಜೆಪಿಸಿ ಭೇಟಿ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ, ಯತ್ನಾಳ್ ಅವರೇ ಮೊದಲು ವಕ್ಫ್ ಕಾಯ್ದೆ ವಿರುದ್ಧ ಹೋರಾಟ ಆರಂಭಿಸಿದ್ದು. ಜನಪರವಾದ ಹೋರಾಟ ಯಾರೇ ಮಾಡಿದರೂ ತಪ್ಪಲ್ಲ. ವಿಜಯೇಂದ್ರ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿ, ಆ ಬಗ್ಗೆ ಸಂಘಟನೆ ವ್ಯವಸ್ಥೆಯಲ್ಲಿ ತೀರ್ಮಾನವಾಗುತ್ತೆ ಎಂದಷ್ಟೇ ಹೇಳಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಂವಿಧಾನದಲ್ಲಿ ವಕ್ಫ್‌ಗೆ ಮಹತ್ವ ಇಲ್ಲ. ಆದರೆ, ಕಾಂಗ್ರೆಸ್ ಸರ್ಕಾರದಲ್ಲಿ ಅತಿ ಹೆಚ್ಚಿನ ಮಹತ್ವ ನೀಡಲಾಗಿದೆ. ಧಾರವಾಡದ ಮಿಶ್ರಿಕೋಟಿಯಲ್ಲಿ 140 ಎಕರೆ ಜಮೀನು ವಕ್ಫ್ ಹೆಸರಿಗೆ ಬದಲಾಗಿದೆ. ಸಹಕಾರಿ ಬ್ಯಾಂಕ್, ಜಮೀನು, ದೇವಸ್ಥಾನಗಳು ಇವೆ. ಇದೇ ಪರಿಸ್ಥಿತಿ ಹಾವೇರಿ ಜಿಲ್ಲೆಯಲ್ಲೂ ಇದೆ. ಸವಣೂರ ತಾಲೂಕು ಕಡಕೋ, ಬ್ಯಾಡಗಿಯ ಹೆಡಿಗೊಂಡ ಸೇರಿ ವಿವಿಧೆಡೆ ರೈತರ ಜಮೀನು ವಕ್ಫ್‌ಗೆ ಸೇರಿಸಲಾಗಿದೆ ಎಂದು ಆರೋಪಿಸಿದರು.

ವಕ್ಫ್ ಬೋರ್ಡ್‌ಗೆ ಪರಮಾಧಿಕಾರ ಕೊಟ್ಟವರು ಕಾಂಗ್ರೆಸ್‌ನವರು. ಕೋರ್ಟಗಳು ಕೂಡ ಮಧ್ಯ ಪ್ರವೇಶಿಸಲು ಆಗದ ಪರಿಸ್ಥಿತಿ ಇದೆ. ಕಾಲಂ ನಂಬರ್ 11ರಲ್ಲಿ ನಮೂದಾಗಿದ್ದ ವಕ್ಫ್ ಹೆಸರು ವಾಪಸ್ ತೆಗೆಯುವಂತೆ ಸಿಎಂ ಸೂಚಿಸಿದ್ದಾರೆ. ನಮಗೆ ಅದು ಬೇಕಾಗಿಲ್ಲ. ಮೂಗಿಗೆ ತುಪ್ಪ ಸವರಬೇಡಿ. ರೈತರ, ದಲಿತರ, ಮಠಗಳ ಬಗ್ಗೆ ಕಾಳಜಿ ಇದ್ದರೆ 1974ರ ಗೆಜೆಟ್ ನೋಟಿಫಿಕೇಶನ್ ರದ್ದುಪಡಿಸಿ. ಇಲ್ಲವೇ ಜೆಪಿಸಿಗೆ ಮನವಿ ಮಾಡಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಿ.ಸಿ.ಪಾಟೀಲ, ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ನಾರಾಯಣಸ್ವಾಮಿ, ಗವಿಸಿದ್ದಪ್ಪ ದ್ಯಾಮಣ್ಣವರ, ಕೆ.ಶಿವಲಿಂಗಪ್ಪ, ಸಿದ್ದರಾಜ ಕಲಕೋಟಿ, ಬಸವರಾಜ ಅರಬಗೊಂಡ, ಪರಮೇಶಪ್ಪ ಮೇಗಳಮನಿ, ಇತರರಿದ್ದರು.

ಬೆಳಗಾವಿ ಅಧಿವೇಶನದಲ್ಲಿ ಗಂಭೀರ ಚರ್ಚೆ

ವಕ್ಫ್ ಹೆಸರಲ್ಲಿ ರೈತರ ಜಮೀನುಗಳನ್ನು ಕಬಳಿಸುವ ಹುನ್ನಾರದ ವಿರುದ್ಧ ಬಿಜೆಪಿ ಹೋರಾಟ ಪ್ರಾರಂಭವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಹಾಗೂ ತಮ್ಮ ನೇತೃತ್ವದಲ್ಲಿ ಮೂರು ತಂಡಗಳು ರಾಜ್ಯಾದ್ಯಂತ ಪ್ರವಾಸ ಮಾಡಿ, ಜನರ ಅಹವಾಲು ಸ್ವೀಕರಿಸಿ, ಅವಲೋಕನ ಮಾಡಿ ಕೇಂದ್ರದ ಜೆಪಿಸಿ ಸಮಿತಿಗೆ ವರದಿ ನೀಡಲಾಗುವುದು. ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಗಂಭೀರವಾಗಿ ಚರ್ಚಿಸಲಾಗುವುದು ಎಂದು ಚಲವಾದಿ ನಾರಾಯಣಸ್ವಾಮಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net