

ಹಾವೇರಿ: ವಂದೇ ಮಾತರಂ ಗೀತೆ ಕೇವಲ ಅಕ್ಷರಗಳಿಂದ ಕೂಡಿದ ಹಾಡು ಅಲ್ಲ. ಈ ಗೀತೆಯ ಮೂಲಕ ಸ್ವಾತಂತ್ರ್ಯ ಹೋರಾಟದ ರಣಘೋಷಣೆಯಾಗಿತ್ತು ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಹೇಳಿದರು.
ನಗರದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಂದೇ ಮಾತರಂ 150ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಗೀತೆಯಿಂದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಸ್ಪೂರ್ತಿ ಪಡೆದು, ಸ್ವಯಂಪ್ರೇರಿತವಾಗಿ ಚಳವಳಿಯಲ್ಲಿ ಭಾಗಿಯಾಗಿ ಬ್ರಿಟಿಷರ ವಿರುದ್ಧ ಹೋರಾಡಿ ತಾಯಿ ಭಾರತಿಗೆ ಪ್ರಾಣ ಸಮರ್ಪಿಸಿದ್ದಾರೆ. ಇಂತಹ ಗೀತೆಗೆ ಇಂದು 150 ವರ್ಷ ತುಂಬಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ ಮಾತನಾಡಿ, ಶ್ರೇಷ್ಠ ಕವಿ ಬಂಕಿಮಚಂದ್ರ ಚಟರ್ಜಿ ಅವರು 1875ರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ನೀಡಲು ವಂದೇ ಮಾತರಂ ಗೀತೆ ರಚಿಸಿದರು. ರವೀಂದ್ರನಾಥ ಟ್ಯಾಗೋರವರು 1896ರಲ್ಲಿ ಮೊದಲ ಬಾರಿಗೆ ಕೋಲ್ಕತದಲ್ಲಿ ಸಾರ್ವಜನಿಕವಾಗಿ ಹಾಡಿದರು. ಬಾಲಗಂಗಾಧರ ತಿಲಕ, ಭಗತ್‌ಸಿಂಗ್, ರಾಜಗುರು, ಸುಖದೇವ, ಸುಭಾಶಚಂದ್ರ ಬೋಸ್ ಇನ್ನೂ ಮುಂತಾದವರಿಗೆ ಈ ಗೀತೆ ಸ್ಪೂರ್ತಿಯಾಗಿತ್ತು. ಆದರೆ, ರಾಷ್ಟ್ರೀಯ ಕಾಂಗ್ರೆಸ್ 1923ರಲ್ಲಿ ಖಾಕಿನಾಡಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಲು ಪಂ.ವಿಷ್ಣು ದಿಗಂಬರ ಪಾಲುಸ್ಕರ್ ಅವರಿಗೆ ವಿರೋಧ ವ್ಯಕ್ತಪಡಿಸಿತು. ಅಂದಿನ ಮುಸ್ಲಿಂ ಲೀಗ್ ನಾಯಕರನ್ನು ಓಲೈಸಲು ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ 1937ರಲ್ಲಿ ರಾಷ್ಟ್ರ ಗೀತೆಯ ಕೆಲವು ಭಾಗಗಳನ್ನು ಕೈಬಿಟ್ಟು ವಂದೇ ಮಾತರಂ ಗೀತೆಯನ್ನು ತುಂಡರಿಸಿತು. ರಾಷ್ಟ್ರೀಯ ಕಾಂಗ್ರೆಸ್ ಸ್ವಾಂತತ್ರ್ಯ ಪೂರ್ವದಲ್ಲಿ ವಂದೇ ಮಾತರಂ ಗೀತಯನ್ನು ತುಂಡರಿಸಿ 1947ರಲ್ಲಿ ಧಾರ್ಮಿಕ ಕಾರಣಕ್ಕೆ ದೇಶವನ್ನು ತುಂಡರಿಸಿ ಭಾರತಕ್ಕೆ ಹಾಗೂ ಭಾರತೀಯ ಸಂಸ್ಕೃತಿಗೆ ದ್ರೋಹ ಎಸಗಿತು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ ಆತ್ಮ ನಿರ್ಭರ ಭಾರತ ನಿರ್ಮಾಣ ಪ್ರತಿಜ್ಞೆ ಭೋದಿಸಿದರು ಹಾಗೂ ಮಂಜುನಾಥ ಗಾಣಿಗೇರ ನ.10ರಂದು ಆಯೋಜಿಸಿರುವ ಏಕತಾ ನಡಿಗೆ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದ ನೆನಪಿಗಾಗಿ ಸಸಿ ನೆಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅರುಣಕುಮಾರ ಪೂಜಾರ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಶೋಭಾ ನಿಸ್ಸಿಮಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾರಾಯಣಿ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಗಿರೀಶ ತುಪ್ಪದ, ನಾಗೇಂದ್ರ ಕಟಕೋಳ, ಅಭೀಷೆಕ ಗುಡಗೂರ, ಚಂದ್ರಣ್ಣ ಹರಿಜನ, ಅಲ್ಲಾಭಕ್ಷ ತಿಮ್ಮಾಪೂರ, ಎನ್.ಪಿ.ಚಾವಡಿ, ಕಾರ್ಯಕರ್ತರು ಭಾಗವಹಸಿದ್ದರು.
ಗುಡ್ಡಪ್ಪ ಭರಡಿ ಸ್ವಾಗತಿಸಿದರು. ಕಿರಣ ಕೋಣನವರ ನಿರೂಪಿಸಿದರು.