

ಹಾವೇರಿ: ತಾನು ಸಮಾಜವಾದಿ ಮುಖಂಡ, 40 ವರ್ಷದಿಂದ ಒಂದೇ ಒಂದು ಕಳಂಕವಿಲ್ಲದ ರಾಜಕಾರಣಿ, ನೈತಿಕ ರಾಜಕಾರಣಿ ಎಂದೆಲ್ಲ ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವಲ್ಪವಾದರೂ ನೈತಿಕತೆ ಇದ್ದರೆ ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್.ಚಂದ್ರಶೇಖರ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಏಕವಚನದಲ್ಲಿ ಮಾತನಾಡುವ ಸಿದ್ದರಾಮಯ್ಯನವರು, ಅದು ಆಡು ಭಾಷೆ ಎಂದು ಸಬೂಬು ಹೇಳುವ ಮೂಲಕ ಭಂಡತನ ಪ್ರದರ್ಶಿಸುತ್ತಾರೆ. ಈ ಹಿಂದೆ ಕೆ.ಜೆ.ಜಾರ್ಜ್, ಸಂತೋಷ್ ಲಾಡ್ ಅವರ ಮೇಲೆ ಆರೋಪ ಬಂದಾಗ ರಾಜೀನಾಮೆ ಪಡೆದಿದ್ದರು. ವಿಚಾರಣೆ ಮುಗಿದು ಮುಕ್ತರಾಗಿ ಬಂದ ಬಳಿಕ ಮತ್ತೆ ಸಚಿವರಾದರು. ಈಶ್ವರಪ್ಪಗೆ ಮಾನ ಮರ್ಯಾದೆ ಇದ್ದರೆ ಮೊದಲು ರಾಜೀನಾಮೆ ಕೊಡಬೇಕು ಎಂದು ಹೇಳಿದ್ದ ಸಿಎಂಗೆ ಈ ಮಾತು ಅನ್ವಯಿಸಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ದಿನಕ್ಕೆ ಎರಡು, ಮೂರು ಅತ್ಯಾಚಾರ ಆಗುತ್ತಿವೆ. ಸರ್ಕಾರ ಅಷ್ಟೇ ಅಲ್ಲ ಪೊಲೀಸರು, ಡಿಸಿಗಳು ರಣಹೇಡಿಗಳಾಗಿದ್ದಾರೆ. ನಾಗಮಂಗಲದಲ್ಲಿ ಖಾಕಿ ಕಣ್ಣೆದುರಲ್ಲೇ ಸಾರ್ವಜನಿಕ ಆಸ್ತಿ ಹಾನಿ ಆಗುತ್ತಿದ್ದರೂ ಸುಮ್ಮನೆ ಇರುತ್ತಾರೆ. 14 ಜಿಲ್ಲೆಗಳಲ್ಲಿ ಎಂಆರ್‌ಐ, ಸ್ಕ್ಯಾನಿಂಗ್ ಯಂತ್ರಗಳು ಬಂದ್ ಆಗಿವೆ. ಸಿಬ್ಬಂದಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಇದರಿಂದ ಜನ ಪರದಾಡುತ್ತಿದ್ದಾರೆ. ಪಂಜಾಬ್ ನಂತರ ರಾಜ್ಯ ದಿವಾಳಿ ಆಗುವ ಹಂತಕ್ಕೆ ತಲುಪಿದೆ. ರಾಹುಲ್ ಗಾಂಧಿ ಸೇರಿ ಎಲ್ಲರೂ ಬೇಲ್ ಮೇಲೆ ಇರುವ ವಂಶ ಕಾಂಗ್ರೆಸ್ ವಂಶ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರನ್ನು ಎದುರಿಸಲು ಅವರ ಪಕ್ಷದಲ್ಲೇ ಸಾಕಷ್ಟು ಜನರಿದ್ದಾರೆ. ಅವರನ್ನು ಎದುರಿಸಲು ಬಿಜೆಪಿ ಸಮರ್ಥವಾಗಿದೆ. ನೀವು ತಪ್ಪು ಮಾಡದೇ ಹೋಗಿದ್ದರೆ ತನಿಖೆ, ವಿಚಾರಣೆ ಎದುರಿಸಿ ಕ್ಲೀನ್ ಚಿಟ್ ಪಡೆದು ಮತ್ತೆ ಸಿಎಂ ಆಗಿ. ಇಲ್ಲದಿದ್ದರೆ ಹೋರಾಟ ಎದುರಿಸಲು ಸಜ್ಜಾಗಿ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಉಪಾಧ್ಯಕ್ಷ ಸುರೇಶ ಹೊಸಮನಿ, ಗಿರೀಶ ತುಪ್ಪದ, ಶಿವಯೋಗಿ ಹುಲಿಕಂತಿಮಠ, ಜಗದೀಶ ಮಲಗೋಡ, ಇತರರಿದ್ದರು.