ಬ್ಯಾಗವಾದಿ ಲಕ್ಕವ್ವಳ ಸಹೋದರ, ಪುತ್ರಿ ಬಂಧಿಸಿ; ಎಸ್‌ಪಿಗೆ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಆಗ್ರಹ

5 HVR 8
Published on

ಹಾವೇರಿ: ಜಿಲ್ಲೆಯ ಹಾಣಗಲ್ಲ ತಾಲೂಕು ಬ್ಯಾಗವಾದಿ ಗ್ರಾಮದ ಮಹಿಳೆಯರು, ಮಕ್ಕಳ ಮಾರಾಟ ಜಾಲದ ಆರೋಪಿ ಲಕ್ಕವ್ವ ಬೆಟಗೇರಿಯನ್ನು ಮಾತ್ರ ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿತರಾದ ಲಕ್ಕವ್ವಳ ಸಹೋದರ ಹಾಗೂ ಪುತ್ರಿಯನ್ನೂ ಬಂಧಿಸಿ, ಇಡೀ ಜಾಲವನ್ನು ಭೇದಿಸುವಂತೆ ಪೊಲೀಸ್ ಇಲಾಖೆಗೆ ಬಿಜೆಪಿ ಆಗ್ರಹಿಸಿತು.

ನಗರದ ಎಸ್‌ಪಿ ಕಚೇರಿಯಲ್ಲಿ ಸೋಮವಾರ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಎಸ್‌ಪಿ ಯಶೋಧಾ ವಂಟಗೋಡಿ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹಾಗೂ ಗಾಂಜಾ ಪ್ರಕರಣಗಳ ಹೆಚ್ಚಾಗುತ್ತಿವೆ. ಬ್ಯಾಗವಾದಿ ಕೇಸ್ ಕುರಿತು ಬಿಜೆಪಿಯಿಂದ ಹಾನಗಲ್ಲನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಬಳಿಕ ಲಕ್ಕವ್ವಳನ್ನು ಮಾತ್ರ ಬಂಧಿಸಲಾಗಿದೆ. ಆಕೆಯ ಸಹೋದರ ಹಾಗೂ ಪುತ್ರಿಗೆ ಪ್ರಬಲ ರಾಜಕೀಯ ಬೆಂಬಲ ಇರುವ ಅನುಮಾನವಿದೆ. ಘಟನೆ ನಡೆದು ಎರಡು ತಿಂಗಳಾದರೂ ಇಲಾಖೆ ಯಾಕೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು. ಒಂದು ವಾರದಲ್ಲಿ ಉಳಿದ ಆರೋಪಿಗಳನ್ನು ಬಂಧಿಸದಿದ್ದರೆ ಆಡೂರು ಪೋಲಿಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಕಿರಣಕುಮಾರ ಕೋಣನವರ ಇದ್ದರು.

ಗಾಂಜಾ ತಡೆಗಟ್ಟಿ :

ಇತ್ತೀಚೆಗೆ ಜಿಲ್ಲೆಗೆ ಅಧಿಕ ಪ್ರಮಾಣದಲ್ಲಿ ಗಾಂಜಾ ಸಾಗಾಟ ಆಗುತ್ತಿರುವುದು ಕಂಡುಬಂದಿದೆ. ಪೊಲಿಸ್ ಇಲಾಖೆ ಕೇವಲ ಗಾಂಜಾ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದರೆ ಸಾಲದು. ಪ್ರಕರಣಗಳ ಸಮಗ್ರ ತನಿಖೆ ನಡೆಸಿ ಅದರಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿಗಳನ್ನು ಬಂಧಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net