ದೇಶಕ್ಕಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮುಖರ್ಜಿ; ಡಾ.ಶ್ಯಾಮ ಪ್ರಸಾದ ಮುಖರ್ಜಿ 123ನೇ ಜನ್ಮದಿನಾಚರಣೆಯಲ್ಲಿ ಸಂತೋಷ ಆಲದಕಟ್ಟಿ

6 HVR 4
Published on

ಹಾವೇರಿ: ಡಾ.ಶ್ಯಾಮ ಪ್ರಸಾದ ಮುಖರ್ಜಿ ಅವರು ನೆಹರು ಅವರ ಆಡಳಿತ ದೇಶಕ್ಕೆ ಮಾರಕವಾಗಿದೆ ಎಂದು ಅರಿತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ಅವರ ರಾಷ್ಟ್ರಪ್ರೇಮವನ್ನು ತೋರಿಸುತ್ತದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ ಹೇಳಿದರು.
ನಗರದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಶ್ಯಾಮ ಪ್ರಸಾದ ಮುಖರ್ಜಿ ಅವರ 123ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಾ.ಶ್ಯಾಮ ಪ್ರಸಾದ ಮುಖರ್ಜಿ ಅವರು ದೇಶದ ಅಖಂಡತೆ ಹಾಗೂ ಭದ್ರತೆ ವಿಚಾರವನ್ನು ಸ್ವಾತಂತ್ರಾೃ ನಂತರದ ಮೊದಲ ಲೋಕಸಭಾ ಅವಧಿಯಲ್ಲಿಯೇ ಗಂಭೀರವಾಗಿ ಪ್ರಸ್ಥಾಪಿಸಿದ್ದರು. ನೆಹರು ಅವರ ವಿಚಾರಧಾರೆಗಳು ಹಾಗೂ ಕಾರ್ಯವೈಖರಿ ಭಾರತದ ಸ್ವಾಯತ್ತತೆ ಹಾಗೂ ಭದ್ರತೆಗೆ ವಿರುದ್ಧವಾಗಿವೆ ಎಂಬುದನ್ನು ಅರಿತು ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರಧಾರೆಯ ಪ್ರೇರಣೆಯಿಂದ ಭಾರತೀಯ ಜನಸಂಘವನ್ನು ಸ್ಥಾಪಿಸಿದರು ಎಂದರು.
ವೈಯಕ್ತಿಕ ಲಾಭಕ್ಕೋಸ್ಕರ ನಮ್ಮ ಸಿದ್ದಾಂತ, ತತ್ವ, ಆದರ್ಶ ಬಲಿಕೊಟ್ಟು ನಾವು ದಿನದಿಂದ ದಿನಕ್ಕೆ ಪಕ್ಷವನ್ನು ಬದಲಾಯಿಸುತ್ತೇವೆ. ಡಾ.ಶ್ಯಾಮ ಪ್ರಸಾದ ಮುಖರ್ಜಿ ಅವರಿಂದ ನಾವೆಲ್ಲರೂ ಪ್ರೇರಣೆಗೊಳ್ಳಬೇಕಾಗಿದೆ ಎಂದರು.
ಮಾಜಿ ಎ.ಪಿ.ಎಂ.ಸಿ. ಸದಸ್ಯ ರುದ್ರೇಶ ಚಿನ್ನಣ್ಣನವರ ಮಾತನಾಡಿ, ರಾಷ್ಟ್ರಕ್ಕೆ ಹೊಸನೀತಿ ನಿರೂಪಣೆಯನ್ನು ನೀಡಿದವರು ಡಾ. ಶ್ಯಾಮ ಪ್ರಸಾದ ಮುಖರ್ಜಿ. ಅವರ 33ನೇ ವಯಸ್ಸಿನಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ರಾಜ್ಯ ಅಲ್ಪಸಂಖ್ಯಾತ ಕಾರ್ಯದರ್ಶಿ ಅಲ್ಲಾಭಕ್ಷ ತಿಮ್ಮಾಪೂರ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಲಿತಾ ಗುಂಡೇನಹಳ್ಳಿ, ಜಿಲ್ಲಾ ವಕ್ತಾರ ನಿರಂಜನ ಹೇರೂರ, ಜಿಲ್ಲಾ ಸಾಮಾಜಿಕ ಜಾಲತಾಣ ಸಹ ಸಂಚಾಲಕ ರವೀಂದ್ರ ಅಂಗಡಿ, ನಗರ ಪ್ರಧಾನ ಕಾರ್ಯದರ್ಶಿ ಗುಡ್ಗಪ್ಪ ಭರಡಿ, ಪ್ರಭು ಹಿಟ್ನಳ್ಳಿ, ವಿಜಯಕುಮಾರ ಚಿನ್ನಿಕಟ್ಟಿ, ಮಾಲಿಂಗಸ್ವಮಿ ಹಿರೇಮಠ, ನಾಗರಾಜ ಹಾರಿಗೋಲ, ಬಸವರಾಜ ಹಾಲಪ್ಪನವರ, ಚಿಕ್ಕಪ್ಪ ದೊಡ್ಡತಳವಾರ, ಆನಂದ ಕಲಾಲ, ಮಂಜುನಾಥ ಮಲಗೋಡ, ಮಲ್ಲಿಕಾರ್ಜುನ ಸಾತೇನಹಳ್ಳಿ, ಸಾಂಕೇತ ಪಾಟೀಲ, ಆನಂದ ಹಡಪದ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net