

ಹಾವೇರಿ: ರಾಜ್ಯ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ಜಾತಿ ಗಣತಿ ಮಾಡುತ್ತಿದೆ. ಕ್ರೈಸ್ತ ಪದ ಜೋಡಿತ 33 ಜಾತಿಗಳನ್ನು ಕೈಬಿಟ್ಟಿದೆ. ಆದರೆ, ಪರಿಶಿಷ್ಟ ಜಾತಿಗಳ ಹಲವು ಉಪ ಜಾತಿಗಳನ್ನು ಕೈಬಿಡದೇ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಆರೋಪಿಸಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಆಂದಿ ಆಂಧ್ರ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್, ಸೇರಿದಂತೆ ಇತರ ಪರಿಶಿಷ್ಟ ಜಾತಿಗಳನ್ನು ಕ್ರೈಸ್ತ ಪಟ್ಟಿಯಿಂದ ತೆಗೆದಿಲ್ಲ. ಸಮೀಕ್ಷೆ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಮುಂದುವರಿದ ಸಮುದಾಯಗಳ ಉಪ ಜಾತಿಗಳ ಹೆಸರು ಕೈಬಿಟ್ಟು, ದಲಿತರು, ದಮನಿತರ ಉಪಜಾತಿಗಳ ಹೆಸರುಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಇವುಗಳನ್ನು ಕೈಬಿಡದಿದ್ದರೆ, ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಲ್ಲ ಹಿಂದು ಸಮಾಜದ ಹಿರಿಯರು, ನಾಗರಿಕರು ಸಮೀಕ್ಷೆ ವೇಳೆ ಧರ್ಮ ಕಾಲಂನಲ್ಲಿ ಹಿಂದು ಎಂದು, ಜಾತಿ ಕಾಲಂನಲ್ಲಿ ತಮ್ಮ ಜಾತಿ ಹೆಸರು ಬರೆಸುವಂತೆ ಮನವಿ ಮಾಡಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್‌ಟಿ ದರ ಪರಿಷ್ಕರಣೆ ಮೂಲಕ 375 ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿದೆ. ಇದರಿಂದ ಗ್ರಾಹಕರು ಸೇರಿದಂತೆ ವ್ಯಾಪಾರಿಗಳು, ಉದ್ಯಮಿಗಳಿಗೂ ಲಾಭವಾಗಲಿದೆ. ರಾಜ್ಯ ಸರ್ಕಾರ ಜನರಿಗೆ ಹತ್ತಿರವಾಗುವ ಇಂತಹ ಕಾರ್ಯಕ್ರಮಗಳನ್ನು ಮಾಡಬೇಕು. ಬದಲಾಗಿ ಜಾತಿ ಸಮೀಕ್ಷೆ ಹೆಸರಲ್ಲಿ ಧರ್ಮ, ಜಾತಿಗಳನ್ನು ಒಡೆಯಬಾರದು ಎಂದು ಸಲಹೆ ನೀಡಿದರು.
ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರಪ್ಪ ಹರಿಜನ ಮಾತನಾಡಿ, ಎರಡು ತಿಂಗಳ ಹಿಂದೆ ಸರ್ಕಾರ 150 ಕೋಟಿ ವೆಚ್ಚದಲ್ಲಿ ನ್ಯಾ.ನಾಗಮೋಹನದಾಸ್ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಮಾಡಿದೆ. ಹಾಗಾಗಿ, ಈಗ ಮತ್ತೆ ದಲಿತರ ಸಮೀಕ್ಷೆ ಮಾಡುವ ಅಗತ್ಯವಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ನಂಜುಂಡೇಶ ಕಳ್ಳೇರ, ಗಿರೀಶ ತುಪ್ಪದ, ಬಸವರಾಜ ಕಳಸೂರ, ಇತರರಿದ್ದರು.