

ಹಾವೇರಿ: ದೇಶಕ್ಕೆ 1947ರಲ್ಲಿ ಸ್ವಾತಂತ್ರ ಸಿಕ್ಕ ನಂತರ ದೇಶದ ಜನತೆ ರಾಷ್ಟ್ರ ನಿರ್ಮಾಣದಲ್ಲಿ ತಲ್ಲೀನರಾಗಿದ್ದರು. ಇಂತಹ ಸಂದರ್ಭದಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು 1975 ಜೂನ್ 25ರಂದು ಕಾನೂನು ಬಾಹರವಾಗಿ ದೇಶದ ಮೇಲೆ ತುರ್ತು ಪರಸ್ಥಿತಿ ಜಾರಿಗೆ ತಂದು ದೇಶದ ಜನರ ಸ್ವಾತಂತ್ರವನ್ನು ಕಿತ್ತುಕೊಂಡರು. ಹಾಗಾಗಿ, ಈ ತುರ್ತು ಪರಸ್ಥಿತಿಯು ಸ್ವಾತಂತ್ರ ಭಾರತದ ನಂತರ ದೇಶ ಕಂಡ ಅತ್ಯಂತ ಕರಾಳ ದಿನ ಎಂದು ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತ ಸುಭಾಷಸಿಂಗ್ ಜಮಾದಾರ ಹೇಳಿದರು.
ಭಾರತೀಯ ಜನತಾ ಪಾರ್ಟಿ ಹಾವೇರಿ ಜಿಲ್ಲಾ ಘಟಕದ ವತಿಯಿಂದ ಹಾವೇರಿ ನಗರದಲ್ಲಿ ಮಂಗಳವಾರ ತುರ್ತು ಪರಿಸ್ಥಿತಿಯ ಕರಾಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ‘ಪಂಜಿನ ಮೆರವಣಿಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಅಂಬೇಡ್ಕರ್ ನಿರ್ಮಿಸಿದ ಸಂವಿಧಾನದ ಜಪ ಮಾಡಿ ಅಧಿಕಾರ ಹಿಡಿಯುವ ಕಾಂಗ್ರೆಸ್ ಪಕ್ಷ ಅಧಿಕಾರ ಸಿಕ್ಕ ನಂತರ ಹಿಂದುಳಿದವರಿಗೆ ಹಾಗೂ ದಲಿತರಿಗೆ ದ್ರೋಹ ಮಾಡಿ ಸಂವಿಧಾನ ಬಾಹಿರವಾಗಿ ಆಡಳಿತ ನಡೆಸುತ್ತದೆ. ಚುನಾವಣಾ ಅಕ್ರಮತೆ ಆಧಾರದ ಮೇಲೆ ಇಂದಿರಾ ಗಾಂಧಿಯವರ ಸಂಸದ ಸ್ಥಾನ ಅನುರ್ಜಿತವಾಗುವ ಸಂದರ್ಭದಲ್ಲಿ ಅವರು ತುರ್ತು ಪರಿಸ್ಥಿತಿ ಹೇರಿದರು. ಇತರ ಪಕ್ಷಗಳ ರಾಜಕೀಯ ನಾಯಕರನ್ನು ಬಂಧಿಸಿ ಜೈಲಿಗೆ ಹಾಕಿದರು. ಪ್ರತಿಕಾ ಸ್ವಾತಂತ್ರೃ ಹರಣ ಮಾಡಿದರು. ಈ ಅಮಾನವೀಯ ಕೃತ್ಯವನ್ನು ದೇಶದ ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ ಹಾಗೂ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿದರು. ವಿಜಯಕುಮಾರ ಚಿನ್ನಿಕಟ್ಟಿ, ಕಿರಣ ಕೋಣನವರ, ಇತರರಿದ್ದರು.
ಪ್ರಮುಖ ಬೀದಿಯಲ್ಲಿ ಸಂಚಾರ :
ಹುಕ್ಕೇರಿ ಮಠದಿಂದ ಆರಂಭಗೊಂಡ ಪಂಜಿನ ಮೆರವಣಿಗೆ ಎಂಜಿ ರಸ್ತೆ ಮಾರ್ಗವಾಗಿ ಮೈಲಾರ ಮಹಾದೇವಪ್ಪ ವೃತ್ತದವರೆಗೆ ಸಾಗಿತು. ಹುತಾತ್ಮ ಮೈಲಾರ ಮಹಾದೇವಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ವೇದಿಕೆ ಸಮಾರಂಭ ನಡೆಸಲಾಯಿತು.