ರಾಜ್ಯ ಸರ್ಕಾರದಿಂದ ರೈತ ವಿರೋಧಿ ಬಜೆಟ್; ಕಲ್ಯಾಣಕುಮಾರ ಶೆಟ್ಟರ ಆರೋಪ

13 BJP 1
Published on

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಸಂಪೂರ್ಣವಾಗಿ ರೈತ ವಿರೋಧಿಯಾಗಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆ, ರೈತ ವಿದ್ಯಾನಿಧಿ, ರೈತ ಶಕ್ತಿ ಸೇರಿದಂತೆ ಅನೇಕ ರೈತಪರ ಯೋಜನೆಗಳನ್ನು ವಾಪಸ್ ಪಡೆದಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು. ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ವಿದ್ಯಾನಿಧಿ ಯೋಜನೆಯಿಂದ ರೈತರು, ಕೂಲಿ ಕಾರ್ಮಿಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಸಹಕಾರಿಯಾಗಿತ್ತು. ಇಂತಹ ಯೋಜನೆಯನ್ನು ಕಾಂಗ್ರೆಸ್ ಕೈಬಿಟ್ಟಿದೆ ಎಂದರು. ಗೋಹತ್ಯೆ ನಿಷೇಧ ಕಾಯ್ದೆ, ಪ್ರತಿಯೊಂದು ಜಿಲ್ಲೆಗೆ ಒಂದು ಗೋಶಾಲೆ ಆರಂಭಿಸುವ ಯೋಜನೆ, ರೈತ ಶಕ್ತಿ ಯೋಜನೆ ಕೈಬಿಟ್ಟಿದ್ದಾರೆ. ಹಿಂದುಗಳ ಭಾವನೆ ಘಾಸಿಗೊಳಿಸುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ 6 ಸಾವಿರ ರೂ. ಜತೆಗೆ ರಾಜ್ಯದ ನಾಲ್ಕು ಸಾವಿರ ರೂ. ಕೊಡುವ ಯೋಜನೆ ಕೈಬಿಟ್ಟಿದ್ದಾರೆ. ವಿದ್ಯುತ್ ದರ ಏರಿಸುವ ಮೂಲಕ ಕೈಗಾರಿಕೆಗಳಿಗೆ ಹೊರೆಯಾಗುವಂತೆ ಮಾಡಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆಯಾಗಿ 53 ದಿನಗಳೇ ಕಳೆದಿದ್ದರೂ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಶಕ್ತಿ ಯೋಜನೆ ಒಂದನ್ನು ಬಿಟ್ಟರೆ ಬೇರಾವ ಯೋಜನೆಗಳೂ ಜನರಿಗೆ ಲಭ್ಯವಾಗುತ್ತಿಲ್ಲ. ಷರತ್ತುಗಳ ಮೂಲಕ ಯೋಜನೆ ಸಿಗದಂತಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈವರೆಗೆ ಬೇರೆ ಬೇರೆ ಕಾರಣಗಳಿಗಾಗಿ 17 ಹತ್ಯೆಗಳು ನಡೆದಿವೆ. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ 17 ಜನಪರ ಯೋಜನೆಗಳನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಈ ಮೂಲಕ ರೈತಾಪಿ ವರ್ಗಕ್ಕೆ ಅನ್ಯಾಯ ಮಾಡಿದೆ. ರಾಜ್ಯ ಸರ್ಕಾರ ವರ್ಗಾವಣೆ ದಂಧೆ ನಡೆಸಿದೆ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪ ಸರಿಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಪಾಲಾಕ್ಷಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ ಚಿನ್ನಣ್ಣನವರ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ಜಿಲ್ಲಾ ಮಾಧ್ಯಮ ಸಂಚಾಲಕ ಕಿರಣ ಕೋಣನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net