ಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ; ಹಾವೇರಿಯಲ್ಲಿ ಜಿಲ್ಲಾ ಘಟಕದಿಂದ ರಸ್ತೆ ಸಂಚಾರ ತಡೆದು ಪ್ರತಿಭಟನೆ

24 HVR 7 B
Published on

ಹಾವೇರಿ: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಘಟಕದಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಕೆಲಕಾಲ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಕಾನೂನು ವ್ಯವಸ್ಥೆಯನ್ನು ಹಾಳು ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮಗೇನಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ ತಕ್ಷಣವೇ ಕಾನೂನಿಗೆ ತೆಲೆಭಾಗಿ ರಾಜೀನಾಮೆ ಕೊಡಿ. ಹೈಕೋರ್ಟ್ ನಿಮ್ಮ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈಗಲೂ ನಾನು ಹಗರಣದಲ್ಲಿ ಭಾಗಿಯಾಗಿಲ್ಲವೆಂದು ಸುಳ್ಳು ಹೇಳಿ ರಾಜ್ಯದ ಜನತೆಯ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಬೇಡಿ ಎಂದರು.
ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಮುಡಾ ಹಗರಣದ ರೂವಾರಿ ಸಿದ್ದರಾಮಯ್ಯನವರೇ ನಿಮ್ಮ ಹೆಂಡತಿಯ ಹೆಸರಿನಲ್ಲಿ ಮಾಡಿರುವ ಆಸ್ತಿಯನ್ನು ಜನತೆಯ ಮುಂದೆ ಇಡಲಾಗಿದೆ. ನಿಮ್ಮಲ್ಲಿ ನಿಜವಾಗಿಯೂ ನೈತಿಕತೆ ಇದ್ದರೆ ತಕ್ಷಣವೇ ರಾಜೀನಾಮೆ ಕೊಟ್ಟು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ. ಇಲ್ಲದಿದ್ದರೆ ತಾಲೂಕು, ಗ್ರಾಮಮಟ್ಟದಲ್ಲಿ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎಸ್‌ಸಿ, ಎಸ್‌ಟಿ ಹಗರಣ, ಮೂಡಾ ಹಗರಣದ ಮೂಲಕ ನಾಡಿನ ಜನತೆಗೆ ಅನ್ಯಾಯ ಎಸಗುತ್ತಿದೆ. ಮಾನ್ಯ ಸಿದ್ದರಾಮಯ್ಯನವರೇ ನೀವು ಈ ಹಗರಣದಲ್ಲಿ ನೇರ ಆರೋಪಿಯಾಗಿದ್ದೀರಿ. ತಪ್ಪಿಸಿಕೊಳ್ಳಲು ಯಾವುದೇ ದಾರಿ ಇಲ್ಲ. ಹಾಗಾಗಿ, ರಾಜೀನಾಮೆ ಕೊಟ್ಟು ಹೊರಬನ್ನಿ ಎಂದರು.
ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ, ರಾಜ್ಯ ಎಸ್.ಟಿ. ಮೋರ್ಚಾ ಕಾರ್ಯಕಾರಿಣಿ ಸದಸ್ಯ ಎನ್.ಎಂ.ಈಟೇರ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಂಜುಂಡೇಶ ಕಳ್ಳೇರ, ಡಾ.ಸಂತೋಷ ಆಲದಕಟ್ಟಿ, ಮಂಜುನಾಥ ಗಾಣಿಗೇರ, ಸುರೇಶ ಹೊಸಮನಿ, ಪ್ರಭು ಹಿಟ್ನಳ್ಳಿ, ಕಿರಣ ಕೋಣನನವರ, ಗಿರೀಶ ಶೆಟ್ಟರ್, ಜಿಲ್ಲಾ, ತಾಲೂಕು ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
ಪೊಲೀಸರೊಂದಿಗೆ ವಾಗ್ವಾದ :
ಪ್ರತಿಭಟನೆ ವೇಳೆ ಕೆಲ ವಾಹನ ಬಿಟ್ಟ ವಿಚಾರವಾಗಿ ಪ್ರತಿಭಟನಾಕಾರರು ಹಾಗೂ ಪೊಲೀಸರೊಂದಿಗೆ ಕೆಲಕಾಲ ವಾಗ್ವಾದ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net