ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

22 HVR 4
Published on

ಹಾವೇರಿ: ಸುಳ್ಳು ಭರವಸೆಗಳನ್ನು ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಇನ್ನಿಲ್ಲದ ಷರತ್ತು ಹಾಕುತ್ತಿದೆ. ಸಂವಿಧಾನ ವಿರೋಧಿ ನೀತಿ ಪ್ರಶ್ನಿಸಿದ ಶಾಸಕರನ್ನು ಅಮಾನತುಗೊಳಿಸಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರದ ವೈಫಲ್ಯ ಸಾಬೀತಾಗಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ ಚಿನ್ನಣ್ಣನವರ ಮಾತನಾಡಿ, ಅಧಿಕಾರಕ್ಕೆ ಬಂದ ಕೂಡಲೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದಿದ್ದ ಕಾಂಗ್ರೆಸ್ ಈಗ ಷರತ್ತುಗಳ ಮೂಲಕ ಜನರಿಗೆ ಮೋಸ ಮಾಡುತ್ತಿದೆ. ಜಿಲ್ಲೆಯಲ್ಲಿ 4 ಲಕ್ಷ ರೇಷನ್ ಕಾರ್ಡುಗಳಿದ್ದು, ಇವರ ಷರತ್ತಿನಿಂದಾಗಿ 1.50 ಲಕ್ಷ ರೇಷನ್ ಕಾರ್ಡುಗಳು ಕುಟುಂಬಗಳು ಯೋಜನೆಯಿಂದ ಹೊರಗೆ ಉಳಿದಿವೆ ಎಂದರು.
ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ, 30ಕ್ಕೂ ಹೆಚ್ಚು ಐಐಎಸ್ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ದುರಹಂಕಾರದ ರೀತಿಯಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಬೆಲೆ ಏರಿಕೆಯಿಂದಾಗಿ ಬಡವರು, ರೈತರು ಕಣ್ಣಿರು ಹಾಕುತ್ತಿದ್ದಾರೆ. ವಿದ್ಯುತ್ ದರವನ್ನೂ ಏರಿಸಿದ್ದಾರೆ. ಬಿಜೆಪಿ ಸರ್ಕಾರದ ರೈತಪರ ಯೋಜನೆಗಳನ್ನು ಕೈಬಿಟ್ಟ ಪರಿಣಾಮ ರಾಜ್ಯದಲ್ಲಿ 46 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಟ್ಲರ್ ರೀತಿಯಲ್ಲಿ ವರ್ತಿಸುತ್ತಿದೆ. ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿರುವ ಸಭಾಧ್ಯಕ್ಷರು ಕೂಡಲೇ ರಾಜೀನಾಮೆ ಕೊಟ್ಟು ಸಂವಿಧಾನದ ಮೌಲ್ಯವನ್ನು ಕಾಪಾಡಬೇಕು. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಅಧಿಕಾರ ಹಿಡಿದವರಿಗೆ ಒಂದೇ ಒಂದು ಕಾಳು ಅಕ್ಕಿ ಕೊಡಲಾಗುತ್ತಿಲ್ಲ ಎಂದು ಕುಟುಕಿದರು.
ಈ ಸಂದರ್ಭದಲ್ಲಿ ಹಾವೇರಿ ನಗರ ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ಸವಣೂರ ಮಂಡಲ ಅಧ್ಯಕ್ಷ ಗಂಗಾಧರ ಬಾಣದ, ರಾಣೇಬೆನ್ನೂರ ನಗರ ಮಂಡಲ ಅಧ್ಯಕ್ಷ ದೀಪು ಹರಪನಹಳ್ಳಿ, ರಾಣೇಬೆನ್ನೂರ ಗ್ರಾಮೀಣ ಮಂಡಲ ಅಧ್ಯಕ್ಷ ಬಸವರಾಜ ಕೇಲಗಾರ, ಜಿಲ್ಲಾ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ರಮೇಶ ಪಾಲನಕರ, ಚನ್ನಮ್ಮ ಬ್ಯಾಡಗಿ, ಪೂರ್ಣಿಮಾ, ಕಲ್ಯಾಣಕುಮಾರ ಶೆಟ್ಟರ, ನಂಜುಂಡೇಶ ಕಳ್ಳೇರ, ನಿರಂಜನ ಹೇರೂರ, ಜಗದೀಶ ಕನವಳ್ಳಿ, ಕಿರಣ ಕೋಣನವರ, ವಿಜಯಕುಮಾರ ಚಿನ್ನಿಕಟ್ಟಿ, ಅಭಿಷೇಕ ಬ್ಯಾಡಗಿ, ಚೇತನ ಬಂಡಿವಡ್ಡರ, ಜಯಣ್ಣ ಶೆಟ್ಟರ, ನಾಗರಾಜ ಹಾರಗೋಲ, ಸದಾನಂದ ಸುರಳಿಹಳ್ಳಿ, ಹನುಮಂತ ತಳವಾರ, ನಾಗರಾಜ ಹುರಳಿಕುಪ್ಪಿ, ಮಂಜುನಾಥ ಹುಲಗೂರ, ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net