

ಹಾವೇರಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಮಧ್ಯಮ ವರ್ಗದವರಿಗೆ ಮತ್ತು ಬಡವರಿಗೆ ಸಾಕಷ್ಟು ಅನಾನುಕೂಲ ಆಗಿದೆ. ಬಡವರು, ಹಿಂದುಳಿದ ವರ್ಗದವರು, ದೀನ ದಲಿತರ ಜೀವನ ಸುಧಾರಿಸುವ ಬದಲು ಬೆಲೆ ಏರಿಕೆ ಮಾಡುವ ಮೂಲಕ ಅವರಿಗೆ ಹೆಚ್ಚಿನ ಅನಾನುಕುಲ ಮಾಡಿದೆ ಕಾಂಗ್ರೆಸ್ ಸರ್ಕಾರ. ರಾಜ್ಯ ಸರ್ಕಾರದ ಗ್ಯಾರಂಟಿಗಳು ಮೋಸದಿಂದ ಕೂಡಿವೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಆರೋಪಿಸಿದರು.
ಭಾರತೀಯ ಜನತಾ ಪಾರ್ಟಿ ಹಾವೇರಿ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಎಲ್ಲ ಸಮುದಾಯಗಳ ಅನುದಾನ ಕಡಿತಗೊಳಿಸಿ, ಇಲಾಖೆಗಳ ಹಣ ಲಪಾಟಯಿಸಲು ಮುಂದಾಗಿದೆ ಸರ್ಕಾರ. ದಿನೇ ದಿನೆ ಕಾಂಗ್ರೆಸ್‌ನ ಭಾಗ್ಯಗಳು ತುಟ್ಟಿ ಭಾಗ್ಯಗಳಾಗಿ ಮಾರ್ಪಟ್ಟಿವೆ. ಈ ಹಿಂದೆ ಸಿದ್ದರಾಮಯ್ಯನವರು ವಿಧಾನಸಭಾ ಚುನಾವಣೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ಪೆಟ್ರೋಲ್, ಡೀಸೆಲ್ ಬೆಲೆ, ರೈತರ ಸಾಮಗ್ರಿಗಳ ಬೆಲೆ, ಬೀಜ ಗೊಬ್ಬರಗಳ ಬೆಲೆಯನ್ನು ಕಡಿಮೆ ಮಾಡುವುದಾಗಿ ಸುಳ್ಳು ಭರವಸೆ ಕೊಟ್ಟು ಅಧಿಕಾರ ಹಿಡಿದರು. ಈಗ ತಾವೇ ಬೆಲೆ ಏರಿಕೆ ಮಾಡುತ್ತಿದ್ದಾರೆ. ಅವರಿಗೆ ಜನರು ತಕ್ಕ ಪಾಠ ಕಲಿಸುವ ದಿನ ಸನಿಹಕ್ಕೆ ಬಂದಿವೆ. ಇನ್ನಾದರೂ ಜನರ ಜೀವನದ ಜತೆಗೆ ಚೆಲ್ಲಾಟ ಆಡುವುದನ್ನು ಬಿಡದೇ ಹೋದರೆ ಕಾಂಗ್ರೆಸ್ ನಿರ್ಣಾಮವಾಗುತ್ತದೆ ಎಂದರು.
ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ, ತೈಲ ಬೆಲೆ ಹೆಚ್ಚಿಸಿದ್ದರಿಂದ ರಾಜ್ಯದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟ 187 ಕೋಟಿ ರೂ.ಯನ್ನು ಬೋಗಸ್ ಖಾತೆಗಳಿಗೆ ವರ್ಗಾವಣೆ ಮಾಡಿ ಲೋಕಸಭಾ ಚುನಾವಣೆ ನಿರ್ವಹಣೆ ಮಾಡಲಿಕ್ಕೆ ಈ ಹಣವನ್ನು ದುರ್ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಎಸ್.ಟಿ. ಸಮುದಾಯಕ್ಕೆ ಆದ ಅನ್ಯಾಯ ಸರಿಪಡಿಸಬೇಕು ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಂಜುಂಡೇಶ ಕಳ್ಳೇರ, ಡಾ.ಸಂತೋಷ ಆಲದಕಟ್ಟಿ, ಎಸ್.ಟಿ ಮೋರ್ಚಾ ರಾಷ್ಟ್ರೀಯ ಪರಿಷತ್ ಸದಸ್ಯ ಮಂಜುನಾಥ ಓಲೇಕಾರ, ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಕೆ.ಶಿವಲಿಂಗಪ್ಪ, ಜಗದೀಶ ಬಸೇಗೆಣ್ಣಿ, ವೆಂಕಟೇಶ ನಾರಾಯಣಿ, ಪ್ರಭು ಹಿಟ್ನಳ್ಳಿ, ನಿರಂಜನ ಹೇರೂರ, ಪರಮೇಶಪ್ಪ ಮೇಗಳಮನಿ, ಕಿರಣ ಕೋಣನವರ, ಲಲಿತಾ ಗುಂಡೇನಹಳ್ಳಿ, ಮಂಡಲ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಕೈಯಲ್ಲಿ ಚಿಪ್ಪು, ಕಿವಿಯಲಿ ಹೂವು
ಬಿಜೆಪಿ ಕಾರ್ಯಕರ್ತರು ಹಾವೇರಿ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಿಂದ ಹೊಸಮನಿ ಸಿದ್ದಪ್ಪ ಸರ್ಕಲ್‌ವರೆಗೆ ಪಾದಯಾತ್ರೆ ಹಾಗೂ ಎತ್ತಿನ ಗಾಡಿಯಲ್ಲಿ ತೆರೆಳಿ ವೃತ್ತದಲ್ಲಿ ಕೆಲಕಾಲ ಪತ್ರಿಭಟನೆ ನಡೆಸಿದರು. ಕೈಯಲ್ಲಿ ಚಿಪ್ಪು ಹಿಡಿದು, ಕಿವಿಯಲ್ಲಿ ಚಂಡಿ ಹೂವು ಇಟ್ಟುಕೊಂಡು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು. ನಂತರ ಜಿಲ್ಲಾಧಿಕಾರಿಯವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.