ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ, ಪ್ರತಿಭಟನೆ

16 HVR 2 B
Published on

ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಜನವಿರೋಧಿ ನೀತಿ ಅನುಸರಿಸುತ್ತಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೋಮವಾರ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ‘ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ’ ಎಂದು ಘೋಷಣೆ ಕೂಗಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರದ ಆಡಳಿತದಿಂದ ರಾಜ್ಯ ದೇಶದಲ್ಲಿ ತಲೆತಗ್ಗಿಸುವಂತಾಗಿದೆ. ಕಳೆದ ಮೂರು ದಿನಗಳಲ್ಲಿ ಕಾಂಗ್ರೆಸ್ ಕೃಪಾಪೋಷಿತ ಬಿಲ್ಡರ್‌ಗಳು ಹಾಗೂ ಬಿಬಿಎಂಪಿ ಸದಸ್ಯರ ಮನೆಗಳಲ್ಲಿ 85 ಕೋಟಿ ರೂ.ಗೂ ಅಧಿಕ ಅಕ್ರಮ ಹಣ ಪತ್ತೆಯಾಗಿದೆ. ಸರ್ಕಾರದ ಕೆಲಸಗಳಿಗೆ ಬಿಲ್ ಪಾಸು ಮಾಡಲು ಪಡೆದಿರುವ ಕಮಿಷನ್ ಹಣ ಎಂಬುದು ಎಲ್ಲರಿಗೂ ತಿಳಿದಿದೆ.
ಇದರ ಜತೆಗೆ ದಸರಾ ಸಂದರ್ಭದಲ್ಲಿ ಖ್ಯಾತ ಹಿರಿಯ ಕಲಾವಿದ ತಾರಾನಾಥ ಅವರಿಗೆ ಲಂಚದ ಬೇಡಿಕೆ ಇಟ್ಟಿರುವುದು ಅತ್ಯಂತ ಹೀನ ಕೆಲಸವಾಗಿದೆ. ಮಳೆ ಇಲ್ಲದೆ ಬರಗಾಲಕ್ಕೆ ರೈತರು ತುತ್ತಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಬಗ್ಗೆ ಯೋಚಿಸದೇ ಭ್ರಷ್ಟಾಚಾರ, ಕಮಿಷನ್, ರಾಜಕೀಯದಲ್ಲಿ ಸರ್ಕಾರ ಮುಳುಗಿಹೋಗಿದೆ. ರೈತರ ಪಂಪಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ನೀಡದ ಸರ್ಕಾರ, ಪರಿಹಾರ ನೀಡದ ಸರ್ಕಾರ ರಾಜ್ಯವನ್ನು ಅಧೋಗತಿಯತ್ತ ತಳ್ಳುತ್ತಿದೆ. ಹಾಗಾಗಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಈ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯಪಾಲರು ಸಕ್ರಾವನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅಪರ ತಹಸೀಲ್ದಾರ್ ಅಮೃತಗೌಡ ಪಾಟೀಲ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಹಾವೇರಿ ಗ್ರಾಮೀಣ ಮಂಡಲ ಅಧ್ಯಕ್ಷ ಬಸವರಾಜ ಕಳಸೂರ, ಗವಿಸಿದ್ದಪ್ಪ ದ್ಯಾಮಣ್ಣನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರುದ್ರೇಶ ಚಿನ್ನಣ್ಣನವರ, ಶಶಿಧರ ಹೊಸಳ್ಳಿ, ಜಿಲ್ಲಾ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ರಮೇಶ ಪಾಲನಕರ, ಬಸವರಾಜ ಕೋಳಿವಾಡ, ಪ್ರಕಾಶ ಪತ್ತಾರ, ಮಂಜುನಾಥ ತಾಂಡೂರ, ಬಸವರಾಜ ಡೊಂಕಣ್ಣನವರ, ನೀಲಪ್ಪ ಚಾವಡಿ, ವಿಜಯಕುಮಾರ ಚಿನ್ನಿಕಟ್ಟಿ, ಮಂಜುನಾಥ ಹುಲಗೂರ, ಗುಡ್ಡಪ್ಪ ಭರಡಿ, ನಾಗರಾಜ ಕೋಣನವರ, ಮಂಜುನಾಥ ಡೋಲೆ, ಮೃತ್ಯುಂಜಯ ಶೆಟ್ಟರ, ಹನುಮಂತಪ್ಪ ದಾಸರ, ಪ್ರಲ್ಹಾದಗೌಡ ಪಾಟೀಲ, ಪಕ್ಕಿರೇಶ ಹಾವನೂರ, ಜಗದೀಶ ಮಲಗೋಡ, ನಿರಂಜನ ಹೇರೂರ, ಮಾಲಿಂಗಸ್ವಾಮಿ ಹಿರೇಮಠ, ನಾಗರಾಜ ಹಾರಗೋಲ, ಸದಾನಂದ ಸುರಳಿಹಳ್ಳಿ, ನಂಜುಂಡೇಶ ಕಳ್ಳೇರ, ನಾಗರಾಜ ಇಚ್ಚಂಗಿ, ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net