

ಹಾವೇರಿ: ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಇಲ್ಲಿನ ದೇವಗಿರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಡಿಸಿ ಕಚೇರಿ ಗೇಟ್ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತಪರ ಅನೇಕ ಯೋಜನೆಗಳ ಮರುಜಾರಿಗೆ ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಕಿಸಾನ್ ಸಮ್ಮಾನ ಯೋಜನೆ, ರೈತ ವಿದ್ಯಾನಿಧಿ, ಭೂಸಿರಿ, ಬೆಂಬಲ ಬೆಲೆ ಮುಂತಾದ ಯೋಜನೆಗಳನ್ನು ರದ್ದುಪಡಿಸುವ ಮೂಲಕ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿಯನ್ನು ಪ್ರದರ್ಶಿಸುತ್ತಿದೆ ಎಂದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಹಿಂದಿನ ಬಿಜೆಪಿ ಸರ್ಕಾರದ ಅನೇಕ ಅಭೀವೃದ್ಧಿ ಯೋಜನೆಗಳಿಗೆ ಬಿಡುಗಡೆ ಮಾಡಿದ್ದ ಅನುದಾನವನ್ನು ಹಿಂಪಡೆದಿದೆ. ವಗಾವಣೆ ದಂಧೆ ಮತ್ತು ಕಮೀಷನ್ ವಸೂಲಿಯಲ್ಲಿ ಮಗ್ನವಾಗಿದೆ ಎಂದು ಕುಟುಕಿದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ರಾಜ್ಯದ ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಅತೀ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಹಾವೇರಿ ಜಿಲ್ಲೆಯಲ್ಲಿ ವರದಿಯಾಗಿವೆ. ಸರ್ಕಾರದ ರೈತ ವಿರೋಧಿ ನೀತಿಯೇ ಇದಕ್ಕೆ ಕಾರಣ. ಜಿಲ್ಲೆಯಲ್ಲಿ ಹಸಿರು ಬರಗಾಲ ಇದ್ದು, ಈ ವರೆಗೆ ಹಾನಿ ಸಮೀಕ್ಷೆ ನಡೆಸಿಲ್ಲ. ರೈತರು ಎರಡು ಮೂರು ಬಾರಿ ಬಿತ್ತನೆ ಮಾಡಿದ್ದರೂ ಬೆಳೆ ಬಂದಿಲ್ಲ. ಕೂಡಲೇ ರೈತನ ಸಹಾಯಕ್ಕೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಪಾಲಾಕ್ಷಗೌಡ ಪಾಟೀಲ, ಗವಿಸಿದ್ದಪ್ಪ ದ್ಯಾಮಣ್ಣವರ, ನೀಲಪ್ಪ ಈಟೇರ, ಕೆ. ಶಿವಲಿಂಗಪ್ಪ, ಗಂಗಮ್ಮ ಹಾವನೂರು, ಶಿವಾನಂದ ಮ್ಯಾಗೇರಿ. ಮತ್ತಿತರರು ಮಾತನಾಡಿದರು.
ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಭೋಜರಾಜ ಕರೂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಾ ಈಳಗೇರ, ರುದ್ರೇಶ ಚಿನ್ನಣ್ಣನವರ, ಶಶಿಧರ ಹೊಸಳ್ಳಿ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿಜಯಕುಮಾರ ಚಿನ್ನಿಕಟ್ಟಿ, ಹನುಮಂತ ತಳವಾರ, ಮಂಡಲಗಳ ಅಧ್ಯಕ್ಷರಾದ ಬಸವರಾಜ ಕಳಸೂರ, ಬಸವರಾಜ ಕೇಲಗಾರ, ದೀಪಕ ಹರಪನಹಳ್ಳಿ, ಗಂಗಾಧರ ಬಾಣದ, ಶಿವಕುಮಾರ ತಿಪ್ಪಶೆಟ್ಟಿ, ಗಿರೀಶ ತುಪ್ಪದ, ರೈತ ಮೋರ್ಚಾ ಮಂಡಲ ಅಧ್ಯಕ್ಷರಾದ ಎಸ್.ವಿ. ಸಂಗೂರಮಠ, ಬೈಲಪ್ಪ ಕೊಟ್ರಣ್ಣನವರ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ಮುರಿಗೆಪ್ಪ ಶೆಟ್ಟರ, ನಿರಂಜನ ಹೆರೂರು, ವಿರುಪಾಕ್ಷಪ್ಪ ಕಡ್ಲಿ, ರೂಪಾ ಬಾಕಳೆ, ಫಕ್ಕಿರಮ್ಮ ಛಲವಾದಿ, ಅಲ್ಲಾಭಕ್ಷ ತಿಮ್ಮಾಪೂರ, ಯೋಗಿನಿ ಸೊಪ್ಪಿನ, ಗುಡ್ಡಪ್ಪ ಭರಡಿ, ಹನುಮಂತಗೌಡ ಮುದಿಗೌಡ್ರ, ಕಿರಣಕುಮಾರ ಕೋಣನವರ, ಚನ್ನಮ್ಮ ಬ್ಯಾಡಗಿ, ಇತರರು ಪಾಲ್ಗೊಂಡಿದ್ದರು.