ಉಪರಾಷ್ಟ್ರಪತಿಗೆ ಅಪಮಾನ, ಬಿಜೆಪಿ ಕಿಡಿ; ಕಾಂಗ್ರೆಸ್, ಐಎನ್‌ಡಿಎ ಒಕ್ಕೂಟದ ವಿರುದ್ಧ ಕೇಸರಿ ಆಕ್ರೋಶ, ಪ್ರತಿಭಟನೆ

21 HVR 1 A
Published on

ಹಾವೇರಿ: ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪದಲ್ಲಿ ಉಪರಾಷ್ಟ್ರಪತಿ ಹಾಗೂ ಸಭಾಪತಿಗಳಿಗೆ ಅಪಮಾನಕರವಾಗಿ ನಡೆದುಕೊಂಡ ವಿರೋಧ ಪಕ್ಷಗಳ ನಡೆ ಖಂಡಿಸಿ ಭಾರತೀಯ ಜನತಾ ಪಕ್ಷ (ಬಿಜೆಪಿ) ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ಯಕರ್ತರು, ಕಾಂಗ್ರೆಸ್ ಹಾಗೂ ಐಎನ್‌ಡಿಐ ಒಕ್ಕೂಟದ ವಿರುದ್ಧ ಘೋಷಣೆ ಕೂಗಿದರು. ಮೂರು ರಾಜ್ಯಗಳ ಸೋಲಿನ ಹತಾಶೆಯಿಂದ ಈ ರೀತಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ರೈತ ಸಮುದಾಯ ಮಾತ್ರವಲ್ಲದೆ ಒಬಿಸಿ ಸಮುದಾಯದ ನಾಯಕ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ಅವಮಾನಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಾಂಗ್ರೆಸ್ ಹಾಗೂ ಐಎನ್‌ಡಿಐ ಒಕ್ಕೂಟ ಮಾಡುತ್ತಿರುವ ಅವಮಾನ ಎಂದು ಹೇಳಿದರು.
ತೃಣಮೂಲ ಕಾಂಗ್ರೆಸ್‌ನ ನಾಯಕ, ಸಂಸದ ಕಲ್ಯಾಣ ಬ್ಯಾನರ್ಜಿ ಅವರು ಉಪರಾಷ್ಟ್ರಪತಿ ಅವರನ್ನು ಲೇವಡಿ ಮಾಡಿದ್ದಾರೆ. ವಿರೋಧ ಪಕ್ಷಗಳ ಕ್ರಮವು ಎಲ್ಲ ರೈತ ಸಮುದಾಯ, ಒಬಿಸಿ ಸಮುದಾಯಕ್ಕೆ ಬೇಸರ ತಂದಿದೆ. ರಾಹುಲ್ ಗಾಂಧಿ ಉಪರಾಷ್ಟ್ರಪತಿಯವರ ಅಣಕು ವಿಡಿಯೋ ಮಾಡಿದ್ದಾರೆ. ಕಾಂಗ್ರೆಸ್‌ನ ಉನ್ನತ ನಾಯಕರ ಸ್ಥಾನದಲ್ಲಿರುವ ರಾಹುಲ್ ಅವರಿಂದ ಇಂತಹ ವರ್ತನೆ ಸರಿಯಲ್ಲ. ವಾಸ್ತವಾವಾಗಿ ಸಂಸತ್ ಮೇಲಿನ ದಾಳಿ ಹಾಗೂ ಭದ್ರತಾ ವೈಫಲ್ಯವನ್ನು ಒಕ್ಕೋರಲಿನಿಂದ ಖಂಡಿಸಬೇಕು. ಇದರಲ್ಲೂ ರಾಜಕೀಯ ಸಲ್ಲ ಎಂದರು.
ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಈ ದೇಶವನ್ನು 63 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಈ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಅಗೌರವದಿಂದ ನಡೆಸಿಕೊಂಡು ಬಂದಿದೆ. ಭಾರತ ಈಗ ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲುತ್ತಿರುವುದನ್ನು ನೋಡಿ ಐಎನ್‌ಡಿಎ ಒಕ್ಕೂಟಕ್ಕೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಕಿಡಿಕಾರಿದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಸಂಸದರ ಪ್ರತಿಭಟನೆಯ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ಅವರ ಸಂಖ್ಯೆ ಇನ್ನಷ್ಟು ಕುಸಿಯಲಿದೆ. ಬಿಜೆಪಿಯ ಬಲ ವೃದ್ಧಿಯಾಗಲಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಷ್ಟು ಅಪಾಯಕಾರಿಯೋ ಅದಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ಅಧಿಕಾರವನ್ನ ಹಿಡಿಯಲು ವರ್ತಿಸುತ್ತದೆ ಎಂಬ ಅಟಲ್ ಬಿಹಾರಿ ವಾಜಪೇಯಿ ಅವರ ಹೇಳಿಕೆಯನ್ನು ಸ್ಮರಿಸಿಕೊಂಡರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ ಹೊಸಳ್ಳಿ, ರುದ್ರೇಶ ಚಿನ್ನಣ್ಣನವರ, ಕೆ.ಶಿವಲಿಂಗಪ್ಪ, ಡಾ.ಸಂತೋಷ ಆಲದಕಟ್ಟಿ, ಮಂಜುನಾಥ ಮಡಿವಾಳರ, ಎಂ.ಎಸ್.ಪಾಟೀಲ, ಗಿರೀಶ ಶೆಟ್ಟರ್, ರತ್ನಾ ಭೀಮಕ್ಕನವರ, ಇತರರಿದ್ದರು.
ಮೋದಿ ಸರ್ಕಾರ ಕೆಳಗಿಳಿಸುವ ಶಕ್ತಿ ಯಾರಿಗೂ ಇಲ್ಲ
ವಿಪಕ್ಷಗಳು ಭದ್ರತಾ ವೈಫಲ್ಯ ಘಟನೆಗೆ ರಾಜಕೀಯದ ಬಣ್ಣವನ್ನು ನೀಡುತ್ತಿವೆ. ಬಿಜೆಪಿಯನ್ನು ಕೆಳಗೆ ಇಳಿಸುವ ಏಕೈಕ ಗುರಿಯನ್ನು ವಿಪಕ್ಷಗಳು ಹೊಂದಿವೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ದುಷ್ಟ ಶಕ್ತಿಗಳಿಗೂ ನರೇಂದ್ರ ಮೋದಿ ಸರ್ಕಾರ ಕೆಳಗಿಳಿಸುವ ಶಕ್ತಿ ಇಲ್ಲ ಎಂದು ಸಿದ್ದರಾಜ ಕಲಕೋಟಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net