

ಹಾವೇರಿ: ರಾಜ್ಯದಲ್ಲಿ ರೈತ ವಿರೋಧಿ, ದಲಿತ ವಿರೋಧಿ, ಹಿಂದು ವಿರೋಧಿ ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿದೆ. ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಅನೇಕ ರೈತಪರ ಯೋಜನೆಗಳನ್ನು ರದ್ದುಗೊಳಿಸುವ ಮೂಲಕ ಇದೊಂದು ನಿಷ್ಕ್ರೀಯ ಸರ್ಕಾರವಾಗಿದೆ ಎಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರೇಯ ಆರೋಪಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಸಾನ್ ಸಮ್ಮಾನ ಯೋಜನೆಯಡಿ ಕೇಂದ್ರದಿಂದ ಆರು ಸಾವಿರ ರೂ. ಹಾಗೂ ರಾಜ್ಯ ಸರ್ಕಾರದಿಂದ ನಾಲ್ಕು ಸಾವಿರ ರೂ. ಸೇರಿ ಪ್ರತಿ ವರ್ಷ ರೈತರಿಗೆ 10 ಸಾವಿರ ರೂ. ಸಹಾಯಧನ ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಅದನ್ನು ರದ್ದುಪಡಿಸಿದೆ. ಬೊಮ್ಮಾಯಿ ಸರ್ಕಾರ ಜಾರಿಗೊಳಿಸಿದ್ದ ರೈತ ವಿದ್ಯಾನಿಧಿ ನಿಲ್ಲಿಸಿದೆ. ಎಪಿಎಂಸಿ ಕಾಯ್ದೆ ಮತ್ತೆ ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣಾಭಿವೃದ್ಧಿ ಯೋಜನೆ,ಕೃಷಿ ಇಲಾಖೆ, ನೀರಾವರಿ ಯೋಜನೆಗಳ ಸಾವಿರಾರು ಕೋಟಿ ರೂ.ಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. 194 ತಾಲೂಕಿನಲ್ಲಿ ತೀವ್ರವಾದ ಬರ ಇದೆ. ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಇದನ್ನು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿದೆ. ಸಚಿವರು ಜಿಲ್ಲೆಗಳಿಗೆ ಹೋಗುತ್ತಿಲ್ಲ ಎಂದರು.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ, ಮಂಡ್ಯದ ಕೆರೆಗೋಡುವಿನಂಥ ಪ್ರಕರಣಗಳಿಗೆ ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯೇ ಕಾರಣ. ಮುಜರಾಯಿ ಇಲಾಖೆ ಹಣ ದುರ್ಬಳಕೆ ಸೇರಿದಂತೆ ಹಿಂದು ವಿರೋಧಿ ನೀತಿಗಳನ್ನು ರಾಜಾರೋಷವಾಗಿ ಸರ್ಕಾರ ಮಾಡುತ್ತಿದೆ. ದಲಿತರಿಗೆ ಮೀಸಲಿಟ್ಟಿದ್ದ ಸಾವಿರಾರು ಕೋಟಿ ಹಣವನ್ನೂ ಈ ಸರ್ಕಾರ ಬಿಟ್ಟಿಲ್ಲ. ಆರ್ಥಿಕ ನಿರ್ವಹಣೆಯಲ್ಲಿ ವಿಫಲವಾಗಿದೆ. 20 ಲಕ್ಷ ಕಿಮೀ ಓಡಿರುವ ಗುಜರಿ ಬಸ್‌ಗಳು ರಸ್ತೆ ಮೇಲಿವೆ.
ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳೇ ಬಿಜೆಪಿಯ ಪ್ರಚಾರ ಅಸ್ತ್ರವಾಗಿದೆ. ಮೋದಿ ಅವರ ವಿಕಸಿತ ಭಾರತ ಎಂಬ ಸಂಕಲ್ಪದೊಂದಿಗೆ ಚುನಾವಣೆ ಎದುರಿಸುತ್ತೇವೆ. ಕಾಂಗ್ರೆಸ್ ಗ್ಯಾರಂಟಿ ಚುನಾವಣೆಯಲ್ಲಿ ಮಾತ್ರ ಓಡುತ್ತವೆ. ಮೋದಿ ಅವರ ಗ್ಯಾರಂಟಿ ದೇಶದ ಬದುಕಿನ ಗ್ಯಾರಂಟಿ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಹ ಸಂಯೋಜಕ ಭೋಜರಾಜ ಕರೂದಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಜಿಲ್ಲಾ ವಕ್ತಾರ ನಿರಂಜನ ಹೆರೂರ, ಕಿರಣ ಕೋಣನವರ, ಇತರರಿದ್ದರು.