ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ರಾಜ್ಯ ನಂಬರ್ ಒನ್; ರಾಜ್ಯದಿಂದ 18 ಲಕ್ಷ, ಜಿಲ್ಲೆಯಿಂದ 61 ಸಾವಿರ ಅರ್ಜಿ; ಮಾಜಿ ಸಚಿವ ಎಸ್.ಎ.ರಾಮದಾಸ

BJP Ramadas
Published on

ಹಾವೇರಿ: ಪಿಎಂ ವಿಶ್ವಕರ್ಮ ಯೋಜನೆಯಡಿ ದೇಶದಲ್ಲಿ ಈವರೆಗೆ 59.88 ಲಕ್ಷ ಮಂದಿ ಆನ್‌ಲೈನ್ ಅರ್ಜಿ ಹಾಕಿದ್ದಾರೆ. ರಾಜ್ಯದಿಂದ 18 ಲಕ್ಷ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ಈ ಮೂಲಕ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಪಿ.ಎಂ.ವಿಶ್ವಕರ್ಮ ಯೋಜನೆಯ ರಾಜ್ಯ ಸಂಚಾಲಕ, ಮಾಜಿ ಸಚಿವ ಎಸ್.ಎ.ರಾಮದಾಸ ತಿಳಿಸಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯಲ್ಲಿ ಈವರೆಗೆ 61,861 ಮಂದಿ ಆನ್‌ಲೈನ್ ಅರ್ಜಿ ಹಾಕಿದ್ದಾರೆ. ಅಕ್ಕಸಾಲಿಗರು, ಕುಂಬಾರರು, ಬಡಗಿಗಳು, ಶಿಲ್ಪಿಗಳು, ಸವಿತಾ ಸಮಾಜದವರು ಸೇರಿದಂತೆ ಕರಕುಶಲ ಕರ್ಮಿಗಳ ಶ್ರಮವನ್ನು ಪ್ರೋತ್ಸಾಹಿಸಲು ಈ ಯೋಜನೆ ಜಾರಿಗೊಳಿಸಲಾಗಿದೆ. ಅರ್ಜಿ ಹಾಕಿದವರಲ್ಲಿ ಅರ್ಹರನ್ನು ಗುರುತಿಸಿ, ತರಬೇತಿ ನೀಡಲಾಗುವುದು ಎಂದರು.
ನವದೆಹಲಿಯಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ರಾಜ್ಯದಿಂದ 10 ಮಂದಿ ಆಯ್ಕೆಯಾಗಿದ್ದು, ಜಿಲ್ಲೆಯಿಂದ ವಿಶ್ವಕರ್ಮ ಯೋಜನೆಯ ಫಲಾನುಭವಿ, ಅಕ್ಕಸಾಲಿಗ ರಮೇಶ ಪಾಲನಕರ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಮುಖಂಡರಾದ ಲಿಂಗರಾಜ ಪಾಟೀಲ, ಭಾರತಿ ಜಂಬಗಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಪಾಲಕ್ಷಗೌಡ ಪಾಟೀಲ, ಶಶಿಧರ ಹೊಸಳ್ಳಿ, ರುದ್ರೇಶ ಚಿನ್ನಣ್ಣನವರ, ಕಿರಣ ಕೋಣನವರ, ಇತರರಿದ್ದರು.
ಪಿಎಂ ಸ್ವನಿಧಿಗೆ 13 ಸಾವಿರ ಕೋಟಿ
ಪಿಎಂ ಸ್ವನಿಧಿ ಯೋಜನೆಗೆ 13 ಸಾವಿರ ಕೋಟಿ ಹಣ ತೆಗೆದಿರಿಸಲಾಗಿದೆ. ರಾಜ್ಯದಲ್ಲಿ 25 ಲಕ್ಷ ಮಂದಿಗೆ ಒಟ್ಟು 765 ಕೋಟಿ ಪ್ರೋತ್ಸಾಹಧನ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆಯಡಿ ಶೇ.80ರಷ್ಟು ಪ್ರಗತಿ ಸಾಧಿಸಿದ್ದು, ಉಳಿದ ಶೇ.20ರಷ್ಟು ಗುರಿಯನ್ನು ಈ ತಿಂಗಳ ಅಂತ್ಯದೊಳಗೆ ತಲುಪಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಪ್ರಚಾರ ಕಾರ್ಯದ ಕೊರತೆ
ಪಿ.ಎಂ ಸ್ವನಿಧಿ ಪ್ರಚಾರ ಕಾರ್ಯಕ್ಕೆ ರಾಜ್ಯಕ್ಕೆ 13 ಕೋಟಿ ನೀಡಲಾಗಿದ್ದು, ಅದರಲ್ಲಿ 8 ಕೋಟಿ ಖರ್ಚು ಮಾಡಲಾಗಿದೆ. ಹಾವೇರಿ ಜಿಲ್ಲೆಗೆ 40 ಲಕ್ಷ ರೂ. ಬಿಡುಗಡೆಯಾಗಿದ್ದು, ಅದರಲ್ಲಿ ಕೇವಲ 6 ಲಕ್ಷ ಮಾತ್ರ ಖರ್ಚಾಗಿದೆ. 34 ಲಕ್ಷ ಬಾಕಿ ಉಳಿದಿದೆ. ಅಧಿಕಾರಿಗಳು ಆಸಕ್ತಿವಹಿಸಿ ಹೆಚ್ಚಿನ ಪ್ರಚಾರ ಕಾರ್ಯ ಕೈಗೊಂಡು ಯೋಜನೆಯನ್ನು ಯಶಸ್ವಿಗೊಳಿಸಬೇಕು. ಯಾವುದೇ ಒತ್ತಡಕ್ಕೆ ಒಳಗಾಗಬಾರದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net