

ಹಾವೇರಿ: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಹೊರ ಹಾಕಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದ ವತಿಯಿಂದ ನಗರದ ಹೊಸಮನಿ ಸಿದ್ದಪ್ಪದಲ್ಲಿ ವೃತ್ತದಲ್ಲಿ ಬುಧವಾರ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ಆಪರೇಷನ್ ಸಿಂದೂರ ಬೆಂಬಲಿಸಿ, ಪಕ್ಷದ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಕಾರ್ಯಕರ್ತರ ಹಣೆಗೆ ತಿಲಕ ಇಟ್ಟು ಸಂಭ್ರಮಾಚರಣೆ ಮಾಡಿದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯನ್ನು ಈ ಸಂದರ್ಭದಲ್ಲಿಯೂ ಅನುಸರಿಸುತ್ತಿರುವುದು ಅತ್ಯಂತ ಮೂರ್ಖತನದ ಪರಮಾವಧಿಯಾಗಿದೆ. ವಿಶ್ವದ ಹಲವಾರು ರಾಷ್ಟ್ರಗಳು ಭಾರತವು ಪಾಕಿಸ್ತಾನದ ಮೇಲೆ ಸಾರಿರುವ ಯುದ್ಧವನ್ನು ಬೆಂಬಲಿಸುತ್ತಿದ್ದರೆ ರಾಜ್ಯ ಕಾಂಗ್ರೆಸ್ ಪಕ್ಷ ತನ್ನ ಸಾಮಾಜಿಕ ಜಾಲತಾಣದಲ್ಲಿ ‘ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ’ ಎಂದು ಬಿತ್ತರಿಸುವ ಮೂಲಕ ಭಾರತದ ಸೈನ್ಯವನ್ನು ಅವಮಾನಿಸುತ್ತಿದೆ ಎಂದರು.
ರಾಜ್ಯ ಕಾಂಗ್ರೆಸ್ ಇತ್ತೀಚೆಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ. ದೇಶದ ರಕ್ಷಣೆ ಹಾಗೂ ಭದ್ರತೆಯ ವಿಷಯದಲ್ಲೂ ವ್ಯತಿರಿಕ್ತ ಹೇಳಿಕೆ ನೀಡುವುದನ್ನು ಗಮನಿಸಿದರೆ ಕರ್ನಾಟಕವನ್ನು ಮತ್ತೊಂದು ಪಾಕಿಸ್ತಾನವನ್ನಾಗಿ ಮಾಡುವ ಹುನ್ನಾರ ನಡೆಸುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ ಮಾತನಾಡಿ, ಪಾಕಿಸ್ತಾನಿ ಪ್ರಜೆಗಳನ್ನು ಹೊರಹಾಕುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿತ್ತು. ಆದರೆ, ರಾಝ್ಯ ಸರ್ಕಾರ ಈವರೆಗೆ ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲ. ಮತಬ್ಯಾಂಕ್ ಓಲೈಕೆಗೆ ಜೋತು ಬಿದ್ದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಶೀಘ್ರವಾಗಿ ಹೊರಹಾಕುವಲ್ಲಿ ವಿಫಲವಾಗಿದೆ. ಈ ಕೂಡಲೇ ಪಾಕಿಸ್ತಾನಿಯರನ್ನು ಹೊರಹಾಕಬೇಕು ಎಂದು ಆಗ್ರಹಿಸಿದರು.
ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ವೆಂಕಟೇಶ ನಾರಾಯಣಿ, ಕಿರಣ ಕೋಣನವರ, ಗಿರೀಶ ತುಪ್ಪದ, ಪ್ರಭು ಹಿಟ್ನಳ್ಳಿ, ವಿಜಯಕುಮಾರ ಚಿನ್ನಿಕಟ್ಟಿ, ಗುಡ್ಡಪ್ಪ ಬರಡಿ, ಅಲ್ಲಾಭಕ್ಷ ತಿಮ್ಮಾಪುರ, ಆಂಜನೇಯ, ಗಿರೀಶ ಶೆಟ್ಟರ್, ಅಡಿವಯ್ಯ ಯಲವಗಿಮಠ, ರುದ್ರೇಶ ಚಿನ್ನಣ್ಣನವರ, ನಾಗರಾಜ ಹರಿಗೋಲ, ಪ್ರಶಾಂತ ಬೆನ್ನೂರ, ಲಲಿತಾ ಗುಂಡೇನಹಳ್ಳಿ, ವಿದ್ಯಾ ಶೆಟ್ಟಿ, ಫಕ್ಕಿರೇಶ ಹಾವನೂರ, ಮಂಜು ಮಲಗೋಡ, ನಿಖಿಲ ಹಿರೇಮಠ, ಶ್ರೀದೇವಿ ರೆಡ್ಡಿ, ರೇಣುಕಾ ಗೌಳಿ, ಸತೀಶ ಗೌಳಿ, ಇತರರಿದ್ದರು.
ಪಕ್ಷಭೇದ ಮರೆತು ಬೆಂಬಲಿಸಿ
ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಮುಕುಟ ಪ್ರಾಯವಿದ್ದಂತೆ. ಅಲ್ಲಿ ದಾಳಿ ಮಾಡಿ ಹತ್ಯೆ ಮಾಡಿದ್ದು ಮನುಕುಲಕ್ಕೆ ವಿರುದ್ಧವಾದದ್ದು. ಪಾಕಿಸ್ತಾನ ಭಯೋತ್ಪಾದಕರನ್ನು ತನ್ನ ನೆಲದಲ್ಲಿ ಪೋಷಣೆ ಮಾಡುತ್ತಿರುವುದು ಜಗತ್ತಿಗೆ ಕಂಟಕ ಪ್ರಾಯ. ಆಪರೇಷನ್ ಸಿಂದೂರ ಮೂಲಕ ಭಾರತ ಪಾಕಿಸ್ತಾನಕ್ಕೆ ಮರೆಯಲಾರದ ಉತ್ತರ ಕೊಟ್ಟಿದೆ. ನಾವೆಲ್ಲರೂ ಪಕ್ಷಭೇದ ಮರೆತು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನೀತಿಯನ್ನು ಬೆಂಬಲಿಸಬೇಕು ಎಂದು ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಕರೆ ನೀಡಿದರು.
ರಾಜ್ಯಪಾಲರಿಗೆ ಮನವಿ
ಹಾವೇರಿ ನಗರದಲ್ಲಿ ವ್ಯಾಪಾರಸ್ಥರು, ಪ್ರಯಾಣಿಕರು, ಗ್ರಾಹಕರು, ಸೇರಿ ವಿವಿಧ ವರ್ಗದ ಜನರೊಂದಿಗೆ ಪಾಕಿಸ್ತಾನಿ ಪ್ರಜೆಗಳನ್ನು ಹೊರಹಾಕಲು ಬೆಂಬಲಿಸಿ ಸಹಿ ಸಂಗ್ರಹ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿಯವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಲಾಯಿತು.