ಬೀದಿಬದಿ ಮುತ್ತು- ರತ್ನ ಮಾರುತ್ತಿದ್ದ ನಾಡು ನಮ್ಮದು; ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ

3 HVR 2
Published on

ಹಾವೇರಿ: ಕನ್ನಡ ನಾಡು ಸಂಪದ್ಬರಿತ ನಾಡು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಮ್ಮ ನಾಡಿನಲ್ಲಿ ಮುತ್ತು, ರತ್ನಗಳನ್ನು ಬೀದಿಬದಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಅಂತಹ ಭವ್ಯ ಇತಿಹಾಸ ಹೊಂದಿದೆ ನಮ್ಮ ಹೆಮ್ಮೆಯ ಕರ್ನಾಟಕ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.

ನಗರದ ಕಾಗಿನೆಲೆ ರಸ್ತೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕ ದಾಸ ಶ್ರೇಷ್ಠರು, ಋಷಿ ಮಹಾಮುನಿಗಳನ್ನು ದೇಶಕ್ಕೆ ಕೊಡುಗೆ ಕೊಟ್ಟಿದೆ ಕರ್ನಾಟಕ. ಇಲ್ಲಿ ಅರಣ್ಯ, ಖನಿಜ ಸಂಪತ್ತು ಹೇರಳವಾಗಿದೆ. ಹತ್ತಾರು ಸಮುದಾಯ, ಭಾಷೆಗಳಿದ್ದರೂ ಎಲ್ಲರೂ ಸಹೋದರರಂತೆ ಒಂದಾಗಿ, ಸಹಬಾಳ್ವೆಯಿಂದ ಬದುಕು ಸಾಗಿಸುತ್ತಿರುವುದು ಹೆಗ್ಗಳಿಕೆಯಾಗಿದೆ. ಭಾಷೆಯ ಉಳಿವಿಗಾಗಿ ಎಲ್ಲರೂ ಶ್ರಮಿಸೋಣ ಎಂದರು.

ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ನಾವು ಕನ್ನಡಿಗರೆಂದು ಗರ್ವದಿಂದ ಹೇಳೋಣ. ನಾವು ಯಾವುದೇ ಉದ್ಯೋಗ ಮಾಡಿದರೂ ಕನ್ನಡದಲ್ಲೇ ವ್ಯವಹರಿಸೋಣ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಹೊಸಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಂಜೆಂಡೇಶ ಕಳ್ಳೇರ, ಸಂತೋಷ ಆಲದಕಟ್ಟಿ, ಚನ್ನಮ್ಮ ಬ್ಯಾಡಗಿ, ಲಲಿತಾ ಗುಂಡೇನಹಳ್ಳಿ, ಜಿಲ್ಲೆ ಹಾಗೂ ಮಂಡಲ ಪದಾಧಿಕಾರಿಗಳು, ಮೋರ್ಚಾ ಪದಾಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net