ಹಾವೇರಿ: ಮುಡಾ ಹಗರಣಗಳ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿಯವರ ವರ್ಗಾವಣೆ ಮಾಡಿರುವುದು ಹಗರಣವನ್ನು ಮುಚ್ಚಿ ಹಾಕಲು ಸಿದ್ದರಾಮಯ್ಯ ಸರ್ಕಾರ ಮಡಿರುವ ಹುನ್ನಾರ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಡಿದ ಅವರು, ಮುಡಾ ಹಗರಣ ಬೆಳಕಿಗೆ ಬರುತ್ತಲೇ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಮುಡಾಗೆ ಅಧ್ಯಕ್ಷರ ನೇಮಕವಾಗುವ ಮುನ್ನ ಜಿಲ್ಲಾಧಿಕಾರಿಯವರೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಮುಡಾದಲ್ಲಿ ನಡೆದ ಹಗರಣಗಳ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆಯುಕ್ತ ಜಿ.ಟಿ.ದಿನೇಶಕುಮಾರಗೆ ಕಾರಣ ಕೇಳಿ ನೋಟೀಸ್ ಸಹ ನೀಡಿದ್ದರು. ಬದಲಿ ನಿವೇಶನಗಳ ಹಂಚಿಕೆಯಲ್ಲಿ ಆಗಿರುವ ಲೋಪಗಳನ್ನು ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಹಾಗಾಗಿ, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಮಲ್ಲಿಕಾರ್ಜುನ ಸ್ವಾಮಿಯವರು ತಮ್ಮ ಸಹೋದರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನಿಗೆ ಅರಿಶಿಣ- ಕುಂಕುಮದ ರೂಪದಲ್ಲಿ ನೀಡುತ್ತಾರೆ. ನೋಟಿಫಿಕೇಷನ್ 6:1 ಆಗಿರುವ ಭೂಮಿಯನ್ನು ಖರೀದಿ ಮಾಡುವುದು ಮತ್ತು ವರ್ಗಾಯಿಸುವುದು ಎರಡೂ ಸಂಗತಿಗಳು ಕಾನೂನು ಬಾಹಿರವಲ್ಲವೇ? ಎಂದು ಪ್ರಶ್ನಿಸಿದರು.
ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ನೀಲಪ್ಪ ಚಾವಡಿ ಮಾತನಾಡಿ, 1991ರ ಕಾನೂನು ಪ್ರಕಾರ 1 ಎಕರೆಗೆ ಮೀರಿದ ಜಮೀನಿಗೆ ಒಂದೇ ನಿವೇಶನ ಕೊಡಬೇಕು ಆದರೆ 3 ಎಕರೆ 16 ಗುಂಟೆ ಜಮೀನಿಗೆ 2 ನಿವೇಶನ ಬದಲು 14 ನಿವೇಶನಗಳನ್ನು ನೀಡಿರುವುದು ಕಾನೂನು ಬಾಹಿರ, 2013ರ ಚುನಾವಣೆಯ ಪ್ರಮಾಣ ಪತ್ರದಲ್ಲಿ ಮಾನ್ಯ ಸಿದ್ದರಾಮಯ್ಯನವರು ಅವರ ಪತ್ನಿಯ ಹೆಸರಿನಲ್ಲಿದ್ದ 3 ಎಕರೆ 16 ಗುಂಟೆ ಭೊಮಿ ಇರುವದನ್ನು ನಮೋದಿಸಿಲ್ಲ ಈ ವಿಷಯವನ್ನು ಚುನಾವಣೆಯ ಅಧಿಕಾರಿಗಳು ಗಂಭಿರವಾಗಿ ಪರಿಗಣಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವಕುಮಾರ ರಾಜನಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಮಂಜುನಾಥ ಮಡಿವಾಳರ, ಮಂಜುನಾಥ ಹುಲಗೂರ, ಹೊನ್ನಪ್ಪ ಕೊಳನವರ, ಷಣ್ಮುಖ ಕಾಳಣ್ಣನವರ, ನಾಗರಾಜ ಹುರಳಿಕುಪ್ಪಿ, ದೀಪಕ ಮಡಿವಾಳರ ಇದ್ದರು.