ಹಾವೇರಿ: ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಉದ್ದೇಶದಿಂದ ಮತಾಂತರಕ್ಕೆ ಪುಷ್ಠಿ ನೀಡುವ ನಿಟ್ಟಿನಲ್ಲಿ 47 ಹಿಂದು ಜಾತಿಗಳ ಜತೆ ಕ್ರಿಶ್ಚಿಯನ್ ಪದಗಳನ್ನು ಸೇರಿಸಿ, ಅವುಗಳಿಗೆ ಕಾನೂನು ಬಾಹಿರವಾಗಿ ಕ್ರಮ ಸಂಖ್ಯೆಯನ್ನು ನೀಡಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ನೀಲಪ್ಪ ಚಾವಡಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026-27ರಲ್ಲಿ ಕೇಂದ್ರ ಸರ್ಕಾರ ಜನಗಣತಿ ಜತೆಗೆ ಜಾತಿ ಜನಗಣತಿ ಮಾಡಲು ತಿರ್ಮಾನಿಸಿದೆ. ಅದಕ್ಕೆ ಸಿದ್ಧತೆಗಳೂ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳನ್ನು ಓಲೈಸುವ ನಿಟ್ಟಿನಲ್ಲಿ ತರಾತುರಿಯಾಗಿ ಸೆ.22ರಿಂದ ಅಕ್ಟೋಬರ್ 7ರವರೆಗೆ ಕೇವಲ 15 ದಿನಗಳಲ್ಲಿ ಸಮೀಕ್ಷೆ ಮಾಡುವುದಾಗಿ ಹೇಳಿದೆ. ರಾಜ್ಯದಲ್ಲಿ 1 ಕೋಟಿ ಜನಸಂಖ್ಯೆ ಇರುವ ಪರಿಶಿಷ್ಠ ಜಾತಿಯ ನಾಗಮೋಹನದಾಸ ವರದಿ ಅನುಷ್ಠಾನಗೊಳಿಸಲು ಸುಮಾರು 3 ತಿಂಗಳು ಹಿಡಿಯಿತು. ಈಗ ಅಖಂಡ 7 ಕೋಟಿ ಜನಸಂಖ್ಯೆ ನಡೆಸಲು ಕೆವಲ 15 ದಿನಗಳಲ್ಲಿ ಹೇಗೆ ಸಾಧ್ಯ ? ಇದು ಜನರನ್ನು ಮೂರ್ಖರನ್ನಾಗಿ ಮಾಡುವ ತಂತ್ರವಾಗಿದೆ ಎಂದರು.
ಸಮೀಕ್ಷೆ ನಡೆಸಲು ಆಗಸ್ಟ್ 22ರಂದು ಪತ್ರಿಕೆಯಲ್ಲಿ ಸುಮಾರು 1,400 ಜಾತಿಗಳ ಪಟ್ಟಿಯನ್ನು ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿದೆ. ಆದರೆ ಅದರಲ್ಲಿ ಹೊಲೆಯ ಕ್ರೀಶ್ಚಯನ್, ಮಾದಿಗೆ ಕ್ರಿಶ್ಚಿಯನ್, ಲಂಬಾಣಿ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್, ಬೆಸ್ತ್ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್ ವಿಶ್ವಕರ್ಮ ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್.. ಹೀಗೆ 47 ಹಿಂದುಳಿದ ಜಾತಿಗಳ ಜತೆಗೆ ಕ್ರಿಶ್ಚಿಯನ್ ಎಂಬ ಶಬ್ದ ಸೇರಿಸಿ ಕಾನೂನು ಬಾಹಿರವಾಗಿ, ಯಾವುದೇ ಅಧ್ಯಯನ ಅಧಿಸೂಚನೆ ಇಲ್ಲದೇ ಏಕಾಏಕಿಯಾಗಿ ಹಿಂದು ಸಮಾಜ ಒಡೆಯುವ ದೃಷ್ಠಿಯಿಂದ ಹೊಸ ಜಾತಿಗಳನ್ನು ಸೃಷ್ಠಿಸಿ ಅನಗತ್ಯ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಕೂಡಲೇ ಪತ್ರಕ್ಕೆ ಲಗತ್ತಿಸಿದ ಎಲ್ಲ ಹಿಂದು ಕ್ರಿಶ್ಚಿಯನ್ ಜಾತಿಗಳನ್ನು ರದ್ದುಪಡಿಸಿ ನೇರವಾಗಿ ಆಯಾ ಜಾತಿಗಳಲ್ಲಿ ಸೇರ್ಪಡೆ ಮಾಡಬೇಕು. ವರ್ಗವಾರು ಕನ್ನಡ ಅಕ್ಷರಮಾಲೆ ಅನುಸಾರ ಜಾತಿಗಳ ಪಟ್ಟಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಅಪರ ಜಿಲ್ಲಾಧಿಕಾರಿಯವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಭೋಜರಾಜ ಕರೂದಿ, ಮಂಜುನಾಥ ಮಡಿವಾಳರ, ಮಂಜುನಾಥ ಗಾಣಿಗೇರ, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಮಂಜುನಾಥ ಹುಲಗೂರ, ವಿನಯ ತಳಗೇರಿ, ಬಸವರಾಜ ಡೊಂಕಣ್ಣನವರ, ಜಗದೀಶ ಮಲಗೊಡ, ಗಜಾನನ ರಾಸಿನಕರ, ಕೃಷ್ಣಾ ಡೋಲೆ, ಇತರರಿದ್ದರು.