

ಹಾವೇರಿ: ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಜೂ.23ರಂದು ಬೆಳಗ್ಗೆ 11 ಗಂಟೆಗೆ ಭಾರತೀಯ ಜನಪಾ ಪಕ್ಷ (ಬಿಜೆಪಿ)ದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ನೂತನ ಜಿಲ್ಲಾಧ್ಯಕ್ಷ, ಬ್ಯಾಡಗಿ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ನಗರದ ಕಾಗಿನೆಲೆ ರಸ್ತೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್.ಅಶೋಕ, ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ, ಇತರ ಗಣ್ಯರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಜನ ಬೇಸತ್ತಿದ್ದಾರೆ. ಜಿಲ್ಲೆಯ ಶಾಸಕರಿಂದ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಸರ್ಕಾರ ರಚಿಸಲಿದೆ. ಮೊದಲಿಗೆ ಎಲ್ಲ ಮಂಡಲಗಳ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಜಿಲ್ಲೆಯ ಕೋರ್ ಕಮಿಟಿ ಸಭೆಯಲ್ಲಿ ಜಿಲ್ಲೆಯ ಪದಾಧಿಕಾರಿಗಳ ಆಯ್ಕೆ ಅಂತಿಮಗೊಳ್ಳಲಿದೆ ಎಂಛ್ಟ್ಠ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ, ಶೋಭಾ ನಿಸ್ಸಿಮಗೌಡ್ರ, ಗವಿಸಿದ್ದಪ್ಪ ದ್ಯಾಮಣ್ಣನವರ, ಪರಮೇಶಪ್ಪ ಮೇಗಳಮನಿ, ನಾಗೇಂದ್ರ ಕಟಕೋಳ, ಸಿದ್ದಣ್ಣ ಚಿಕ್ಕಬಿದರಿ, ಇತರರಿದ್ದರು.
ಹಿಂದಿನ ಅಧ್ಯಕ್ಷರೊಂದಿಗೆ ಭಿನ್ನಾಭಿಪ್ರಾಯವಿಲ್ಲ
ದಿಢೀರ್ ಆಗಿ ಬಿಜೆಪಿ ಜಿಲ್ಲಾಧ್ಯಕ್ಷರ ಬದಲಾವಣೆಗೆ ಕಾರಣವೇನು ? ನಿಕಟಪೂರ್ವ ಅಧ್ಯಕ್ಷರೊಂದಿಗೆ ಭಿನ್ನಾಭಿಪ್ರಾಯ ಇದೆಯಾ ? ಎಂಬ ಪ್ರಶ್ನೆಗೆ ಉತ್ತರಿಸಿದ ವಿರುಪಾಕ್ಷಪ್ಪ ಬಳ್ಳಾರಿ, ಪಕ್ಷದ ಸಂವಿಧಾನದ ಪ್ರಕಾರ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಿದ್ದಾರೆ. ಹಿಂದಿನ ಅಧ್ಯಕ್ಷರೊಂದಿಗೆ ಯಾವುದೇ ಭಿನಾಭಿಪ್ರಾಯವಿಲ್ಲ. ಎಲ್ಲರೂ ಸೇರಿ ಸಂಘಟನೆ ಮಾಡುತ್ತೇವೆ ಎಂದರು.
ಮಟಕಾದಲ್ಲಿ ಶಾಸಕರ ಕೈವಾಡ ?
ಜಿಲ್ಲೆಯಲ್ಲಿ ಇಸ್ಪೀಟ್, ಮಟಕಾ ದಂಧೆ ಅವ್ಯಾಹತವಾಗಿ ನಡೆದಿದೆ. ಇದರ ಹಿಂದೆ ಕೆಲ ಶಾಸಕರ ಕೈವಾಡವೂ ಇದೆ. ಮಟಕಾದಿಂದ ಶಾಸಕರಿಗೂ ಮಾಮೂಲು ಹೋಗುತ್ತದೆ. ಅವರ ಸಂಬಳಕ್ಕಿಂತ ಹೆಚ್ಚಿನ ಹಣ ಸಿಗುತ್ತಿದೆ. ಹಾನಗಲ್ಲ ತಾಲೂಕು ತಿಳವಳ್ಳಿ ಗ್ರಾಮದ ಮಹಿಳೆಯೊಬ್ಬರು ಮಟಕಾದಿಂದ ನನ್ನ ಗಂಡ ಹಾಳಾಗುತ್ತಿದ್ದಾನೆ. ಮಟಕಾ ಬಂದ್ ಮಾಡಿಸಿ ಎಂದು ಪೊಲೀಸರಿಗೆ ಮನವಿ ಮಾಡಿದ್ದರು. ಈ ಬಗ್ಗೆ ಯಾವ ಕ್ರಮವೂ ಆಗಲಿಲ್ಲ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಆರೋಪಿಸಿದರು.