ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಫೆ.1ರಂದು ; ಬಿ.ವೈ.ವಿಜಯೇಂದ್ರ, ಬಸವರಾಜ ಬೊಮ್ಮಾಯಿ ಭಾಗಿ; ನೂತನ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿಕೆ

BJP Arunkumar pujar PC
Published on

ಹಾವೇರಿ: ಭಾರತೀಯ ಜನತಾ ಪಕ್ಷ (ಬಿಜೆಪಿ)ದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ ಫೆ.1ರಂದು ನಗರದಲ್ಲಿ ನಡೆಯಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು.
ನಗರದ ಕಾಗಿನೆಲೆ ರಸ್ತೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11 ಗಂಟೆಗೆ ತೋಟದ ಯಲ್ಲಾಪುರದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಸ್ವಾಗತಿಸಲಾಗುವುದು. ಬೃಹತ್ ಬೈಕ್ ರ‌್ಯಾಲಿ ಮೂಲಕ ಕೆಇಬಿ ಕಚೇರಿ ವೃತ್ತಕ್ಕೆ ಆಗಮಿಸಲಾಗುವುದು. ನಂತರ ಅಲ್ಲಿಂದ ಮೆರವಣಿಗೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ತೆರಳಿ ಹೊಸಮನಿ ಸಿದ್ದಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. ಎಂಜಿ ರಸ್ತೆ ಮಾರ್ಗವಾಗಿ ಹುಕ್ಕೇರಿ ಮಠದ ಶಿವಬಸವೇಶ್ವರ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ಸಾಗಿ, ನಂತರ ಅಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲಾಗುವುದು ಎಂದರು.
ರ‌್ಯಾಲಿ ಹಾಗೂ ಪದಗ್ರಹಣ ಸಮಾರಂಭದಲ್ಲಿ ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು, ಸ್ಥಳಿಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ರಾಜ್ಯ, ಜಿಲ್ಲಾ, ತಾಲೂಕು ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ಕಿರಣಕುಮಾರ ಕೋಣನವರ, ಗಿರೀಶ ತುಪ್ಪದ, ಇತರರು ಉಪಸ್ಥಿತರಿದ್ದರು.
ಲೋಕಸಭೆ ಚುನಾವಣೆಗೆ ದಿಕ್ಸೂಚಿ
ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಪದಗ್ರಹಣ ಸಮಾರಂಭ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಟಿಕೆಟ್ ಹಂಚಿಕೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು, ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಈ ಕುರಿತು ಈವರೆಗೆ ಯಾವುದೇ ಸೂಚನೆ ಬಂದಿಲ್ಲ. ಶೀಘ್ರದಲ್ಲೇ ಜಿಲ್ಲಾ ಘಟಕ ರಚಿಸಲಾಗುವುದು ಎಂದು ಅರುಣಕುಮಾರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net