

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಭಾರತ 2047ಕ್ಕೆ ವಿಶ್ವದ ನಂಬರ್ ಒನ್ ದೇಶ ಆಗಬೇಕೆಂದರೆ ವಿದೇಶಿ ವಸ್ತುಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ, ಸ್ವದೇಶಿ ವಸ್ತುಗಳನ್ನು ಬಳಸಿ ನರೇಂದ್ರ ಮೋದಿಯವರ ನೇತೃತ್ತದಲ್ಲಿ ಭವ್ಯ ಭಾರತ, ಆತ್ಮನಿರ್ಭರ, ನಶಾಮುಕ್ತ ಭಾರತ ಮಾಡುತ್ತೇವೆ ಎಂದು ಸಂಕಲ್ಪ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ನಶಾಮುಕ್ತ ಭಾರತದ ಸಂಕಲ್ಪದೊಂದಿಗೆ ಆತ್ಮನಿರ್ಭರ ಭಾರತಕ್ಕಾಗಿ ಜಿಲ್ಲಾ ಬಿಜೆಪಿ ಘಟಕದಿಂದ ನಗರದ ಎಂ.ಜಿ ರಸ್ತೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಮೋ ರನ್ ಮ್ಯಾರಾಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯುವಕರಲ್ಲಿ ದೇಶ ಪ್ರೇಮ, ಜಾಗೃತಿ ಮೂಡಿಸಬೇಕು. ಯುವಕರು ತಮ್ಮ ಬದುಕನ್ನು ಅತ್ಯಂತ ಯಶಸ್ವಿಯಾಗಿ ತತ್ವನಿಷ್ಠೆಯಿಂದ ಬದುಕಬೇಕೆ ಎನ್ನುವುದು ಪ್ರಧಾನಿಯವರ ಬಯಕೆ. ಅದಕ್ಕಾಗಿ ಎಲ್ಲ ಕಾರ್ಯಕ್ರಮಗಳಲ್ಲಿ ಯುವಕರನ್ನು ಜೋಡಿಸಿಕೊಂಡಿದ್ದಾರೆ. ಉದಾಹರಣೆಗೆ ಸ್ಟಾರ್ಟ್ ಆಪ್‌ನಲ್ಲಿ ಯುವಕರಿಗೆ ಅವಕಾಶ ಕಲ್ಪಿಸಿದ್ದಾರೆ. ಹಿಂದಿನ ಸರ್ಕಾರಗಳು ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಪ್ರಧಾನಿ ಮೋದಿ ಯುವಕರ ಭಾವನೆ ಅರ್ಥ ಮಾಡಿಕೊಂಡು ಖೇಲೊ ಇಂಡಿಯಾ, ಫಿಟ್ ಇಂಡಿಯಾ ಜಾರಿಗೊಳಿಸಿದರು. ಒಲಿಂಪಿಕ್ ಬಂದಾಗ ಜೀತೋ ಇಂಡಿಯಾ ಎಂದು ಹೇಳಿ ಯುವಕರಲ್ಲಿ ಉತ್ಸಾಹ ತುಂಬಿದರು ಎಂದರು.
ಇಡಿ ವಿಶ್ವವೇ ಇಂದು ಮೋದಿ ಅವರ ಮಾತು ಕೇಳುತ್ತದೆ. ಕೆಲವರು ನಮ್ಮ ದೇಶವನ್ನು ಒಡೆಯುವ ಮಾತನಾಡುತ್ತಾರೆ. ಹೊರ ದೇಶಕ್ಕೆ ಹೋದಾಗ ನಮ್ಮ ದೇಶದ ಪ್ರಜಾಪ್ರಭುತ್ವದ ಬಗ್ಗೆ ತುಚ್ಚವಾಗಿ ಮಾತನಾಡುತ್ತಾರೆ. ಆದ್ದರಿಂದ ನಮ್ಮ ಯುವಕರು ಜಾಗೃತರಾಗಿರಬೇಕು. ಪ್ರಧಾನಮಂತ್ರಿಯವರನ್ನು ನಿಮ್ಮ ಧರ್ಮ ಯಾವುದು ಎಂದು ಕೇಳಿದಾಗ ಸಂವಿಧಾನವೇ ನಮ್ಮ ಧರ್ಮ ಎಂದು ಹೇಳಿದರು. 25 ಕೋಟಿ ಜನರನ್ನು ಬಡತನದಿಂದ ಮುಕ್ತ ಮಾಡಿದ್ದು ವಿಶ್ವ ದಾಖಲೆಯಾಗಿದೆ ಎಂದರು.
ಭಾರತೀಯರಿಂದ ಭಾರತೀಯರಿಗೋಸ್ಕರ ಉತ್ಪಾದನೆಯಾದ ವಸ್ತುಗಳನ್ನು ಬಳಸಬೇಕು. ವಿದೇಶಿ ವ್ಯಾಮೋಹ ಕಡಿಮೆ ಮಾಡಬೇಕು. ಫೋನ್ ನಮ್ಮ ದೇಶದಲ್ಲಿಯೇ ಉತ್ಪಾದನೆಯಾಗುತ್ತದೆ. ಅದು ವಿದೇಶಕ್ಕೆ ಹೋಗಿ ಅಲ್ಲಿಯ ಲೇಬಲ್ ಹಚ್ಚಿಕೊಂಡು ಬರುತ್ತದೆ. ಐಫೋನ್ ಶೇ.25ರಷ್ಟು ನಮ್ಮ ಕರ್ನಾಟಕ ತಮಿಳುನಾಡಿನಲ್ಲಿ ತಯಾರಾಗುತ್ತವೆ. ಅಷ್ಟು ತಂತ್ರಜ್ಞಾನ ಬೆಳೆದಿದೆ ಎಂದರು.
ಡ್ರಗ್ಸ್ ವಿರುದ್ಧ ಸಮರ:
ನಾನು ಗೃಹ ಸಚಿವನಾಗಿದ್ದಾಗ ಡ್ರಗ್ಸ್ ವಿರುದ್ಧ ಸಮರ ಸಾರಿದ್ದು ಅತಿ ಹೆಚ್ಚು ವಿದೇಶಿ ಡ್ರಗ್ಸ್ ಪತ್ತೆ ಹೆಚ್ಚಿ ಸುಟ್ಟು ಹಾಕಿದ್ದು ನಮ್ಮ ಬಿಜೆಪಿ ಸರ್ಕಾರದಲ್ಲಿ. ಯಾವುದೇ ಸಂಸ್ಥೆಯಲ್ಲಿ ಡ್ರಗ್ ಮಾರಾಟವಾದರೂ ಯುವಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಬೇಕು. ನಶೆ ಯುವಕರ ಬದುಕನ್ನು ನರಕ ಮಾಡುತ್ತದೆ ಎಂದರು.
ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿದರು. ಮಾಜಿ ಶಾಸಕ ಶಿವರಾಜ ಸಜ್ಜನರ, ಡಾ.ಬಸವರಾಜ ಕೇಲಗಾರ, ಯುವ ಮುಖಂಡ ಭರತ ಬೊಮ್ಮಾಯಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಭೋಜರಾಜ ಕರೂದಿ, ಪರಮೇಶಪ್ಪ ಮೇಗಳಮನಿ, ಭಾರತಿ ಜಂಬಗಿ, ಮಂಜುನಾಥ ಗಾಣಿಗೇರ, ಗಿರೀಶ ತುಪ್ಪದ, ಸಂತೋಷ ಅಲದಕಟ್ಟಿ, ನಂಜುಂಡೇಶ ಕಳ್ಳೇರ, ಕಲ್ಯಾಣಕುಮಾರ ಶೆಟ್ಟರ, ನೀಲಪ್ಪ ಚಾವಡಿ, ಕಿರಣಕುಮಾರ ಕೋಣನವರ, ರುದ್ರೇಶ ಚಿನ್ನಣ್ಣನವರ, ಜಗದೀಶ ಬಸೇಗಣ್ಣಿ, ಪಾಲಾಕ್ಷಗೌಡ ಪಾಟೀಲ, ಕೆ.ಶಿವಲಿಂಗಪ್ಪ, ಅಭಿಷೇಕ ಗುಡಗೂರ, ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ನವೆಂಬರ್‌ನಲ್ಲಿ ಸ್ವದೇಶಿ ಮೇಳ
ಪ್ರಧಾನಿ ಮೋದಿಯವರ ಜನ್ಮದಿನ ಅಂಗವಾಗಿ ಈಗಾಗಲೇ ಆರೋಗ್ಯ ಶಿಬಿರ, ಮ್ಯಾರಾಥಾನ್ ಮಾಡಿದ್ದೇವೆ. ನವೆಂಬರ್‌ನಲ್ಲಿ ಸ್ವದೇಶಿ ಮೇಳ ಹಾಗೂ ನಮೋ ಸಂಸದರ ಕ್ರೀಡಾಕೂಟ ಏರ್ಪಡಿಸಲಿದ್ದೇವೆ. ಎಲ್ಲರೂ ಪಾಲ್ಗೊಳ್ಳಬೇಕು. ಮೋದಿಯವರದು ಪವರ್ ಪೊಲಿಟಿಕ್ ಅಲ್ಲ, ಜನರನ್ನು ಒಳಗೊಂಡಿರುವ ಜನರ ರಾಜಕಾರಣ, ನಾವೆಲ್ಲರೂ ಮೋದಿಯವರಿಗೆ ಕೈಜೋಡಿಸೋಣ ಎಂದರು ಬಸವರಾಜ ಬೊಮ್ಮಾಯಿ.
ಕೋಟ್:
ಪ್ರಧಾನಿ ಮೋದಿಯವರಿಗೆ 75 ವರ್ಷ ತುಂಬಿದೆ. ಅಧಿಕಾರದಲ್ಲಿ 25 ವರ್ಷ ಪೂರೈಸಿದ್ದಾರೆ. ಅವರಿಲ್ಲದ ದೇಶ ಕಲ್ಪಿಸಿಕೊಳ್ಳುವುದು ಕಷ್ಟ. ದೇಶದ ಮೇಲೆ ನಿರಂತರ ದಾಳಿ ಆಗುತ್ತಿತ್ತು, ಈಗ ಆಗುತ್ತಿಲ್ಲ. ಜಗತ್ತಿನ ಆರ್ಥಿಕತೆಯಲ್ಲಿ ದೇಶ 7ರಿಂದ 3ನೇ ಸ್ಥಾನಕ್ಕೆ ಬಂದಿದೆ. ಅವರ ವಿರುದ್ದ ಸಾಕಷ್ಟು ಅಪಪ್ರಚಾರ ನಡೆಸಿದರು. ಅದನ್ನೇ ಸಕಾರಾತ್ಮಕವಾಗಿ ಸ್ವೀಕರಿಸಿ ಕೆಲಸ ಮಾಡಿದ್ದಾರೆ. ಯುವಶಕ್ತಿ ಈ ದೇಶದ ಭವಿಷ್ಯ. ಮೋದಿಜಿ ಶತಾಯುಷಿಗಳಾಗಲಿ, ಇರುವಷ್ಟು ದಿನ ಪ್ರಧಾನಿಯಾಗಿಯೇ ಇರಲಿ.
- ಬಿ.ಸಿ.ಪಾಟೀಲ, ಮಾಜಿ ಸಚಿವ