

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ನಶಾಮುಕ್ತ ಭಾರತಕ್ಕಾಗಿ ಬಿಜೆಪಿ ವತಿಯಿಂದ ನಗರದಲ್ಲಿ ಅ.11ರಂದು ನಮೋ ಯುವಾ ರನ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ನಗರದ ಕಾಗಿನೆಲೆ ರಸ್ತೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 8 ಗಂಟೆಗೆ ವಾಲ್ಮೀಕಿ ವೃತ್ತದಿಂದ ರ‌್ಯಾಲಿ ಆರಂಭವಾಗಲಿದೆ. ಹೊಸಮನಿ ಸಿದ್ದಪ್ಪ ವೃತ್ತದ ಮಾರ್ಗವಾಗಿ ಮೈಲಾರ ಮಹದೇವಪ್ಪ ವೃತ್ತದವರೆಗೆ ಸಾಗಲಿದೆ. ಭಾಗವಹಿಸುವ ಎಲ್ಲರಿಗೂ ಉಚಿತವಾಗಿ ಟಿ ಶರ್ಟ್, ಮೆಡಲ್ ವಿತರಿಸಲಾಗುವುದು. ಮೊದಲ ಐವರು ವಿಜೇತರಿಗೆ ವಿಶೇಷ ಉಡುಗೊರೆ ನೀಡಲಾಗುವುದು.
ರ‌್ಯಾಲಿಯಲ್ಲಿ 600ಕ್ಕೂ ಅಧಿಕ ಕಾಲೇಜ್ ವಿದ್ಯಾರ್ಥಿಗಳು, ಯುವಕ ಸಂಘಗಳು, ಸ್ಪೋರ್ಟ್ಸ್ ಕ್ಲಬ್, ವಾಕರ್ಸ್ ಕ್ಲಬ್, ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳು ಭಾಗವಹಿಸಲಿವೆ. ಸಂಸದ ಬಸವರಾಜ ಬೊಮ್ಮಾಯಿ, ಜಿಲ್ಲೆಯ ಎಲ್ಲ ಮಾಜಿ ಶಾಸಕರು, ಮುಖಂಡರು, ವೈದ್ಯರು, ಇಂಜಿನಿಯರ್‌ಗಳು, ವ್ಯಾಪಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಬ್ಯಾಗವಾದಿ ಗ್ರಾಮದ ಅಕ್ರಮ ಯುವತಿಯರ ಸಾಗಣೆ ಜಾಲ ಹಾಗೂ ರಸ್ತೆಗುಂಡಿಗಳ ದುರಸ್ತಿಗಾಗಿ ಬಿಜೆಪಿಯಿಂದ ಹೋರಾಟ ಮಾಡಿದ್ದೇವೆ. ಮಾಧ್ಯಮಗಳೂ ವರದಿ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ನೈತಿಕತೆ ಇದ್ದರೆ ನ್ಯಾಯ ದೊರಕಿಸಬೇಕು ಎಂದರು.
ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ತಹಸೀಲ್ದಾರ್ ಪ್ರತಿಭಟನೆಗೆ ನಿರ್ಬಂಧ ಹೇರಿ ಆದೇಶಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಬಳ್ಳಾರಿ, ಈ ಮೂಲಕ ಕಾಂಗ್ರೆಸ್ ಸರ್ಕಾರ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಜಿಲ್ಲಾಧಿಕಾರಿಯವರು ಈ ಬಗ್ಗೆ ಗಮನ ಹರಿಸಬೇಕು. ಕೂಡಲೇ ಈ ಆದೇಶ ವಾಪಸ್ ಪಡೆಯಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಪಾಲಾಕ್ಷಗೌಡ ಪಾಟೀಲ, ನಾಗೇಂದ್ರ ಕಡಕೋಳ, ಕಲ್ಯಾಣಕುಮಾರ ಶೆಟ್ಟರ, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಚಂದ್ರಪ್ಪ ಹರಿಜನ, ಇತರರಿದ್ದರು.