ರಾಜ್ಯದಲ್ಲಿರುವುದು ಲೂಟಿ ಕಾಂಗ್ರೆಸ್ ಸರ್ಕಾರ; ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಟೀಕೆ

N Ravikumar
Published on

ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಕಾಂಗ್ರೆಸ್ ಪಾಲಿಗೆ ಎಟಿಎಂ ಆಗಿದೆ. ರಾಹುಲ್ ಗಾಂಧಿ, ಸುರ್ಜೆವಾಲಾ ಆಗಾಗ ಇಲ್ಲಿಗೆ ಬಂದು ಸೂಟ್‌ಕೇಸ್ ತುಂಬಿಕೊಂಡು ಹೋಗುತ್ತಾರೆ. ವಾಲ್ಮೀಕಿ ನಿಗಮದ 140 ಕೋಟಿ ಹಣವನ್ನು ತೆಲಂಗಾಣ ಚುನಾವಣೆಗೆ ಬಳಸುತ್ತಾರೆ. ಇಂತಹ ಭ್ರಷ್ಟ, ಜನವಿರೋಧಿ, ರೈತ ವಿರೋಧಿ, ಹಿಂದು ವಿರೋಧಿ ಸರ್ಕಾರ ಆದಷ್ಟು ಬೇಗ ತೊಲಗಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಟೀಕಿಸಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಹೊಸಪೇಟೆಯಲ್ಲಿ ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶ ಮಾಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.

ಆರೋಗ್ಯ ಇಲಾಖೆ 289 ಬಾಣಂತಿಯರ ಸಾವಿಗೆ ಕಾರಣವಾಗಿದೆ. ರಾಜ್ಯದಲ್ಲಿ ಜನೌಷಧ ಕೇಂದ್ರಗಳನ್ನು ಮುಚ್ಚುತ್ತಿದೆ. ಶಿಕ್ಷಣ ವಿರೋಧಿ ಸರ್ಕಾರ 9 ವಿಶ್ವವಿದ್ಯಾಲಯ ಮುಚ್ಚಲು ಹೊರಟಿದೆ. ಗ್ಯಾರಂಟಿಗಳ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ನಾಲ್ಕು ತಿಂಗಳಾದರೂ ಗೃಹಲಕ್ಷ್ಮೀ ಹಣ ಕೊಟ್ಟಿಲ್ಲ. ದೀಪಾವಳಿಗೆ ಕೊಡುತ್ತೇವೆ, ಗಣಪತಿ ಹಬ್ಬಕ್ಕೆ ಎಂದರು ಕೊಡಲಿಲ್ಲ. ‘ಪ್ರತಿ ತಿಂಗಳು ಕೊಡಲು ನಾವೇನು ನಿಮಗೆ ಸಂಬಳ ಕೊಡುತ್ತೀವಾ. ತೆರಿಗೆ ಸಂಗ್ರಹ ಆದರೆ ಹಾಕುತ್ತೇವೆ’ ಎಂದು ಡಿ.ಕೆ ಶಿವಕುಮಾರ ಹೇಳುತ್ತಾರೆ ಎಂದರು.

ಈ ಸರ್ಕಾರ ಎರಡು ವರ್ಷದಲ್ಲಿ 3,6,986 ಕೋಟಿ ಸಾಲ ಮಾಡಿದೆ. ಸ್ವಾತಂತ್ರ್ಯ ಬಂದಾಗಿನಿಂದ 2023ರವರೆಗೆ ರಾಜ್ಯದ ಮೇಲೆ 5 ಲಕ್ಷ ಕೋಟಿ ಸಾಲ ಇತ್ತು. ಸಿದ್ದರಾಮಯ್ಯ ಬಂದ ಎರಡು ವರ್ಷದಲ್ಲಿ 8 ಲಕ್ಷ ಕೋಟಿಗೆ ಏರಿದೆ. 38,800 ಕೋಟಿ ದಲಿತರ ಹಣ ಗ್ಯಾರಂಟಿಗೆ ಬಳಸಿದ್ದಾರೆ. ಈ ಕೂಡಲೇ 38 ಸಾವಿರ ಕೋಟಿಯನ್ನು ದಲಿತರಿಗೆ ವಾಪಸ್ ಕೊಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಬಿ.ಸಿ ಪಾಟೀಲ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ಸಿದ್ದರಾಜ ಕಲಕೋಟಿ, ಡಾ.ಬಸವರಾಜ ಕೇಲಗಾರ, ಗವಿಸಿದ್ದಪ್ಪ ದ್ಯಾಮಣ್ಣನವರ, ಇತರರಿದ್ದರು.

ಕಾಂಗ್ರೆಸ್ ಪಾಕ್‌ನ ಮಿತ್ರ ಪಕ್ಷ 

ಪಾಕಿಸ್ತಾನದ ಪರವಾಗಿ ಮಾತನಾಡಿ ಸಿಎಂ ಸಿದ್ದರಾಮಯ್ಯ ಪಾಕ್‌ನಲ್ಲಿ ಭಾರಿ ಸುದ್ದಿಯಲ್ಲಿದ್ದರು. ಖರ್ಗೆ ಹೇಳುತ್ತಾರೆ ನಮ್ಮ ಪಾಕಿಸ್ತಾನ, ನಮ್ಮ ಸೈನಿಕರು ಚೂಟ್‌ಪುಟ್ ಯುದ್ದ ಮಾಡಿದ್ದಾರೆ ಎಂದು. ಗುತ್ತಿಗೆಯಲ್ಲಿ 4ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ಶಿಕ್ಷೆ ಇಲ್ಲ. ಒಟ್ಟಾರೆ ಕಾಂಗ್ರೆಸ್ ದೇಶದಲ್ಲಿ ಪಾಕಿಸ್ತಾನದ ಆಡಳಿತ ಪಕ್ಷದ ಮಿತ್ರ ಪಕ್ಷದಂತೆ ವರ್ತಿಸುತ್ತಿದೆ ಎಂದು ರವಿಕುಮಾರ ಆಕ್ರೋಶವ್ಯಕ್ತಪಡಿಸಿದರು.

ಕೋಟ್:

ಕಾಂಗ್ರೆಸ್‌ನವರ ಹೃದಯ ಬಗೆದರೆ ಪಾಕಿಸ್ತಾನ ಕಾಣುತ್ತದೆ. ದೇಶದ್ರೋಹಿಗಳ ಬಗ್ಗೆ ಅವರಿಗೆ ಎಷ್ಟು ಪ್ರೀತಿ ಇದೆ ಎಂಬುದು ಈಗ ಎಲ್ಲರಿಗೂ ಅರ್ಥವಾಗುತ್ತದೆ. ಪಾಕಿಸ್ತಾನ ವೈರಿ ದೇಶ ಎಂಬುದು ಖಗೆ ಬಾಯಲ್ಲಿ ಬರಲಿಲ್ಲ. ಖರ್ಗೆ ಅವರು ಅವರ ಮನದಾಳ ಹೊರ ಜಗತ್ತಿಗೆ ತಿಳಿಸಿದ್ದಾರೆ. ಅವರಿಗೆ ಅಭಿನಂದನೆಗಳು. ರಾಜ್ಯದ ಎಲ್ಲ ಸಚಿವರು ಲೀಗಲ್ ಆಗಿ ಬೆಲೆ ಏರಿಕೆಯ ಮೂಲಕ ರಾಜ್ಯವನ್ನು ದರೋಡೆ ಮಾಡುತ್ತಿದ್ದಾರೆ.

- ಬಿ.ಸಿ ಪಾಟೀಲ, ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net