

ಹಾವೇರಿ: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಚುನಾವಣೆ ಕಾರ್ಯಾಲಯವನ್ನು ಮಾಜಿ ಸಚಿವ, ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆ ಸಂಚಾಲಕ ಕಳಕಪ್ಪ ಬಂಡಿ ಉದ್ಘಾಟಿಸಿದರು.
ನಂತರ ಚುನಾವಣೆ ಕುರಿತು ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದ ಕಳಕಪ್ಪ ಬಂಡಿ, ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗುವುದು ಅತ್ಯಂತ ಅವಶ್ಯವಿದೆ. ಈಗಾಗಲೇ ಹತ್ತು ವರ್ಷಗಳಲ್ಲಿ ಭಾರತವನ್ನು ಹಿಂದೆಂದೂ ಕಂಡಿರದಷ್ಟು ಅಭಿವೃದ್ಧಿಯ ಪಥದಲ್ಲಿ ನೋಡುತ್ತಿದ್ದೇವೆ. ಈ ಬಾರಿ ನಾವು ಮತ್ತೊಮ್ಮೆ ಶ್ರಮವಹಿಸಿ, ಮೋದಿ ಅವರ ಕೊಡುಗೆಗಳನ್ನು ಮನೆ ಮನೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಈಗಾಗಲೇ ಚುನಾವಣೆ ಕುರಿತು ಕಾರ್ಯಯೋಜನೆ ಸಿದ್ಧಗೊಂಡಿದ್ದು, ನಮಗೆ ವಹಿಸಿರುವ ಜವಾಬ್ದಾರಿಯನ್ನು ನಾವೆಲ್ಲರೂ ಅಚ್ಚುಕಟ್ಟಾಗಿ ನಿರ್ವಹಿಸಬೇಕಿದೆ. ಅಲ್ಲದೇ ಈ ಬಾರಿ ಅಭ್ಯರ್ಥಿ ಯಾರೇ ಇದ್ದರೂ ಕೂಡ ಬಿಜೆಪಿಯ ಪರವಾಗಿ ಸ್ಪರ್ಧಿಸಿದ ಅಭ್ಯರ್ಥಿಯನ್ನು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.
ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ ಮಾತನಾಡಿ, ಬಿಜೆಪಿ ಅತ್ಯಂತ ವಿಶಿಷ್ಟ ಪಕ್ಷ. ಸಾಮಾನ್ಯ ಕಾರ್ಯಕರ್ತನ ಕಾರ್ಯಕ್ಷಮತೆಯನ್ನು ಗುರುತಿಸಿ ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿ ಗೌರವಿಸುವಂತಹ ಪಕ್ಷವಾಗಿದೆ. ನಾವೆಲ್ಲರೂ ಪಕ್ಷವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಬೇಕು ಎಂದರು.
ಜಿಲ್ಲಾ ಸಂಘಟನಾ ಪ್ರಭಾರಿ ಎಲ್.ಎನ್.ಕಲ್ಲೇಶ ಹಾಗೂ ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿದರು.
ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇರಗಾರ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡರ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಭೋಜರಾಜ ಕರೂದಿ, ಪಾಲಾಕ್ಷಗೌಡ ಪಾಟೀಲ, ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣವರ, ಗದಗ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಕ್ಕಿರೇಶ ರಟ್ಟಿಹಳ್ಳಿ, ಲಿಂಗರಾಜ ಪಾಟೀಲ, ಹಾವೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಂಜುಂಡೇಶ ಕಳ್ಳೇರ, ಮಂಜುನಾಥ ಗಾಣಿಗೇರ, ಸಂತೋಷ ಆಲದಕಟ್ಟಿ, ಮತ್ತಿತರರು ಪಾಲ್ಗೊಂಡಿದ್ದರು.