

ಹಾವೇರಿ: ನರೇಂದ್ರ ಮೋದಿ ಅವರ 10 ವರ್ಷಗಳ ಆಡಳಿತದಲ್ಲಿ ಹಿಂದೆಂದೂ ಕಾಣದಂತಹ ಮಹಿಳಾ ಅಭಿವೃದ್ದಿ ಈ ಅವಧಿಯಲ್ಲಿ ನಡೆದಿದೆ. ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಹಿಳೆಯರನ್ನು ಸಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಸದೃಡಗೊಳಿಸದ್ದಾರೆ ಎಂದು ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಶೋಭಾ ನಿಸ್ಸೀಮಗೌಡ್ರ ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ನಾರಿಶಕ್ತಿ ವಂದನ ಮ್ಯಾರಾಥಾನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರದಿಂದ ಬಿಡುಗಡೆಯಾದ ಫಲಾನುಭವಿಗಳ ಹಣ ಇಂದು ದೇಶದ ಕಟ್ಟ ಕಡೆಯ ಹಳ್ಳಿಯ ಮನೆಗೂ ತಲುಪಲು ಮೋದಿಯವರ ಪಾರದರ್ಶಕ ಯೋಜನೆಗಳೇ ಕಾರಣ. ಈಗ ನಾವು ಮೊತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸಿ ದೇಶದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಬೇಕಾಗಿದೆ. ಎನ್.ಆರ್.ಎಲ್.ಎಂ ಎನ್.ಯು.ಎಲ್.ಎಂ ಯೋಜನೆ ಮುಖಾಂತರ 18 ಸಾವಿರ ಮಹಿಳಾ ಸಂಘ ಸಂಸ್ಥೆಗಳಿಗೆ ಸುಮಾರು 50 ಕೋಟಿ ರೂ. ಆರ್ಥಿಕ ವ್ಯವಹಾರ ನಡೆದಿದೆ. ಅಲ್ಲದೇ ಮುದ್ರಾ ಯೋಜನೆ, ಉಜ್ವಲ ಯೋಜನೆ, ಜನಧನ್ ಯೋಜನೆ ಹಾಗೂ ಉಜಾಲ ಯೋಜನೆ ಮೂಲಕ, ರಾಜಕೀಯ ಕ್ಷೇತ್ರದಲ್ಲಿ ಮಹಿಳಿಯರಿಗೆ ಹೆಚ್ಚಿನ ಸ್ಥಾನಗಳನ್ನು ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆಂದು ಹೇಳಿದರು.
ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿದ್ಯಾ ಶೆಟ್ಟಿ ಮಾತನಾಡಿ, ಪ್ರಧಾನಿ ಮೋದಿ ಅವರಿಂದಾಗಿ ಭಾರತದ ಮಹಿಳೆಯರು ಇಂದು ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ತಲೆಎತ್ತಿ ಹೆಮ್ಮೆಯಿಂದ ಜೀವಿಸುವಂತಾಗಿದೆ ಎಂದು ಮಾತನಾಡಿದರು.
ದೇಶಕ್ಕಾಗಿ ಓಟ, ಮೋದಿಗಾಗಿ ಓಟ ಎಂಬ ಶೀರ್ಷಿಕೆ ಅಡಿಯಲ್ಲಿ ಆಯೋಜಿಸಿದ್ದ ಮ್ಯಾರಾಥಾನ್ ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾಗಿ ಮೈಲಾರ ಮಹಾದೇವಪ್ಪ ವೃತ್ತದವರೆಗೆ ನಡೆಯಿತು. ನಂತರ ಅಲ್ಲಿ ವೇದಿಕೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಉತ್ತರ ಕನ್ನಡ ಜಿಲ್ಲಾ ಪ್ರಭಾರಿ ಭಾರತಿ ಜಂಬಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ.ಸಂತೋಷ ಆಲದಕಟ್ಟಿ, ಮಂಜುನಾಥ ಗಾಣಿಗೇರ, ನಂಜುಂಡೇಶ ಕಳ್ಳೇರ, ಹಾವೇರಿ ನಗರ ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಲಿತಾ ಗುಂಡೇನಹಳ್ಳಿ, ಜಿಲ್ಲಾ ವಕ್ತಾರ ನಿರಂಜನ ಹೇರೂರ, ಮತ್ತಿತರರು ಪಾಲ್ಗೊಂಡಿದ್ದರು.