

ಹಾವೇರಿ: ಹಾನಗಲ್ಲ ತಾಲೂಕಿನ ಕಲಕೇರಿ ಗ್ರಾಮದ ಸರ್ವೆ ನಂಬರ್ 53/1 ಎ, 145, 47 ಸರ್ಕಾರಿ ಜಮೀನಿನಲ್ಲಿ ಕೆಲವರು ಅಕ್ರಮವಾಗಿ ಉಳುಮೆ ಮಾಡಲು ಮುಂದಾಗಿರುವುದನ್ನು ತಡೆಯುವಂತೆ ಆಗ್ರಹಿಸಿ ಬಿಜೆಪಿ ಪ್ರಮುಖರು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸೋಮವಾರ ಮನವಿ ಸಲ್ಲಿಸಿದರು. ಹೈಕೋರ್ಟ್ ಆದೇಶ ಮರೆಮಾಚಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಉಳುಮೆ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಅಕ್ರಮ ಸಕ್ರಮ ಎಂದು ಠರಾವು ಮಾಡಿಸಿಕೊಂಡಿದ್ದರು. ಸವಣೂರ ಉಪವಿಭಾಗಾಧಿಕಾರಿಗಳು ಇದನ್ನು ಅಕ್ರಮ ಸಕ್ರಮ ಕಮಿಟಿಯಲ್ಲಿ ರದ್ದುಪಡಿಸಿ ಆದೇಶಿಸಿದ್ದರು.
ಆದರೂ ಕೆಲವರು ಉಳುಮೆ ಮಾಡಲು ಹೊಂಚು ಹಾಕಿದ್ದಾರೆ. ಇದಕ್ಕೆ ಕೆಲ ಪ್ರಭಾವಿ ರಾಜಕಾರಣಿಗಳ ಸಹಕಾರ ಇದೆ. ಹಾಗಾಗಿ, ಸರ್ಕಾರಿ ಜಮೀನನ್ನು ರಕ್ಷಿಸಿ, ಸಾರ್ವಜನಿಕ ಬಳಕೆಗೆ ಕೊಡಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ, ಮಾಲತೇಶ ಸೊಪ್ಪಿನ, ಭೋಜರಾಜ ಕರೂದಿ, ಕಲ್ಯಾಣಕುಮಾರ ಶೆಟ್ಟರ್, ಕೃಷ್ಣ ಈಳಿಗೇರ, ಗ್ರಾಮಸ್ಥರು ಇದ್ದರು.