ಕಾಂಗ್ರೆಸ್ ಸರ್ಕಾರದ ಎರಡನೇ ವರ್ಷದ ಪುಣ್ಯತಿಥಿ; ಹೊಸಪೇಟೆ ಕೈ ಸಮಾವೇಶದ ಬಗ್ಗೆ ಮಾಜಿ ಸಚಿವ ಬಿಸಿ ಪಾಟೀಲ ಲೇವಡಿ

BJP, Ex Minister, BC Patil, Pressmeet,
Published on

ಹಾವೇರಿ: ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಜನರಿಂದ ಸುಲಿಗೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡಲು ಹೊರಟಿದೆ. ಇದು ಸಾಧನಾ ಸಮಾವೇಶ ಅಲ್ಲ. ಬದಲಾಗಿ ಕಾಂಗ್ರೆಸ್ ಸರ್ಕಾರದ ಎರಡನೇ ವರ್ಷದ ಪುಣ್ಯತಿಥಿ ಎಂದು ಮಾಜಿ ಕೃಷಿ ಸಚಿವ ಬಿ.ಸಿ ಪಾಟೀಲ ಲೇವಡಿ ಮಾಡಿದ್ದಾರೆ.

ನಗರದ ಕಾಗಿನೆಲೆ ರಸ್ತೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದವರು ಜನರಿಂದ ನೇರವಾಗಿ ದರೋಡೆಗೆ ಇಳಿದಿದ್ದಾರೆ. ಎಲ್ಲದರಲ್ಲೂ ಬೆಲೆ ಏರಿಕೆ ಮಾಡಿ ಗ್ಯಾರಂಟಿ ಹೆಸರಲ್ಲಿ ತೂತು ಮುಚ್ಚಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಪಹಲ್ಗಾಮ್‌ನ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನ ನೆಲಕಚ್ಚುವಂತೆ ಮಾಡಿದೆ. ಭಾರತೀಯ ಮುಸಲ್ಮಾನರು ಕೂಡ ಇದನ್ನು ಮೆಚ್ಚಿದ್ದಾರೆ. ಕಾಂಗ್ರೆಸ್‌ನವರು ತಿರಂಗಾ ಯಾತ್ರೆ ಎಂಬ ಹೆಸರಲ್ಲಿ ಡೋಂಗಿ ಯಾತ್ರೆ ಮಾಡಿದರು. ತಮಗೆ ಹತ್ತಿರುವ ಕಳಂಕ ಕಳೆದುಕೊಳ್ಳಲು ಯಾತ್ರೆ ಮಾಡಿದರು ಎಂದರು.

ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಪಾಕಿಸ್ತಾನವೇ ಒಪ್ಪುತ್ತಿದೆ. ಆದರೆ, ಕಾಂಗ್ರೆಸ್‌ನವರು ಸಾಕ್ಷ್ಯ ಬೇಕು ಎನ್ನುತ್ತಿದ್ದಾರೆ. ನಿಮಗೆ ಸಾಕ್ಷ್ಯ ಬೇಕಾದರೆ ಪಾಕಿಸ್ತಾನಕ್ಕೆ ಹೋಗಿ ನೋಡಿಕೊಂಡು ಬನ್ನಿ. ಸಚಿವ ಪ್ರಿಯಾಂಕ್ ಖರ್ಗೆ ಮೇ 7ರಿಂದ ಮೇ 12ರವರೆಗೆ ಪ್ರಧಾನಿ ಎಲ್ಲಿದ್ದರು ? ಎನ್ನುತ್ತಾರೆ. ಒಂದು ನಿಮಿಷವೂ ಬಿಡುವಿಲ್ಲದೇ ಪ್ರಧಾನಿ ಕೆಲಸ ಮಾಡುತ್ತಾರೆ ಎಂಬುದು ಅವರಿಗೆ ಅರಿವಿಲ್ಲ. ಬ್ರಹ್ಮೋಸ್ ಮತ್ತು ಆಕಾಶ್ ಯುದ್ದ ಪರಿಕರಗಳು ಕಾಂಗ್ರೆಸ್ ಕಾಲದಲ್ಲಿ ಆಗಿದ್ದು ಎಂದು ಸಚಿವ ಮಧು ಬಂಗಾರಪ್ಪ ಸುಳ್ಳು ಹೇಳುತ್ತಾರೆ. 2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ತಯಾರಾಗಿದ್ದು ಎಂಬುದು ಅವರಿಗೆ ಗೊತ್ತಿಲ್ಲ ಎಂದರು.

ನಾಲ್ಕೈದು ತಿಂಗಳಿನಿಂದ ಗೃಹಲಕ್ಷ್ಮೀ ಹಣ ಬಂದಿಲ್ಲ. ಚುನಾವಣೆ ಬಂದರೆ ಹಣ ಬರುತ್ತದೆ. ಉಪಚುನಾವಣೆ ಇದ್ದಾಗ ಮೂರು ಕ್ಷೇತ್ರದಲ್ಲಿ ಮಾತ್ರ ಹಣ ಸಂದಾಯ ಮಾಡಿದರು. ನಂತರ ಮರೆತರು. ಇದು ನಾಟಕದ ಸರ್ಕಾರ. ಸರ್ಕಾರದ ಹಣ ದುಂದುವೆಚ್ಚ ಮಾಡಿ ಹೊಸಪೇಟೆಯಲ್ಲಿ ಸಮಾವೇಶ ಮಾಡಲು ಹೊರಟಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಕುಟುಕಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಪರಮೇಶ್ವರಪ್ಪ ಮೇಗಳಮನಿ, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ವೆಂಕಟೇಶ ನಾರಾಯಣಿ, ಇತರರಿದ್ದರು.

ಪಾಕ್‌ಗೆ ದಿಟ್ಟ ಉತ್ತರ ಕೊಟ್ಟಿದೆ ಮೋದಿ ಸರ್ಕಾರ

ಕಾಂಗ್ರೆಸ್ ಅವಧಿಯಲ್ಲಿ ಪಾರ್ಲಿಮೆಂಟ್ ಮೇಲಿನ ದಾಳಿ, ಸೇರಿದಂತೆ ಹಲವು ಬಾರಿ ಪಾಕಿಸ್ತಾನ ದೇಶದ ಮೇಲೆ ದಾಳಿ ಮಾಡಿದರೂ ಕಾಂಗ್ರೆಸ್ ಸರ್ಕಾರ ಸುಮ್ಮನಿತ್ತು. ಇದೇ ಕಾರಣಕ್ಕೆ ಇಂದು ಪಾಕಿಸ್ತಾನ ಭಯೋತ್ಪಾದಕರ ಫ್ಯಾಕ್ಟರಿಯಾಗಿ ಬದಲಾಗಿದೆ. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಮುಟ್ಟಿ ನೋಡಿಕೊಳ್ಳುವ ಹಾಗೆ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಉತ್ತರ ಕೊಟ್ಟಿದೆ ಎಂದು ಬಿ.ಸಿ ಪಾಟೀಲರು ಹೇಳಿದರು.

ಜಿಲ್ಲೆಯಲ್ಲಿ ಅಕ್ರಮ ದಂಧೆ ಕೇಕೆ

ಹಾವೇರಿ ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್, ಮಟಕಾ, ಮರಳು ದಂಧೆ ಸೇರಿ ಅಕ್ರಮಗಳು ಕೇಕೆ ಹಾಕುತ್ತಿವೆ. ಪೊಲೀಸರು ಇವುಗಳಿಗೆ ಮಟ್ಟ ಹಾಕುತ್ತಿಲ್ಲ. ಅಕ್ರಮ ಮದ್ಯದ ಹಾವಳಿ ಮಿತಿಮೀರಿದೆ. 15 ವರ್ಷದ ಮಕ್ಕಳು ಕುಡಿತಕ್ಕೆ ದಾಸರಾಗುತ್ತಿದ್ದಾರೆ. ಜಿಲ್ಲೆಯ ಪೊಲೀಸ್ ಠಾಣೆಗಳು, ಸರ್ಕಾರಿ ಕಚೇರಿಗಳು ಕಾಂಗ್ರೆಸ್ ಕಚೇರಿಗಳಂತಾಗಿವೆ ಎಂದು ಬಿ.ಸಿ ಪಾಟೀಲರು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net