ಅಕ್ರಮ ಚಟುವಟಿಕೆಗೆ ಪೊಲೀಸರ ಸಾಥ್ : ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಗಂಭೀರ ಆರೋಪ

8 BJP PC
Published on

ಹಾವೇರಿ: ಜಿಲ್ಲೆಯಲ್ಲಿ ಮಟಕಾ, ಇಸ್ಪೀಟ್ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು, ಕೋಟ್ಯಂತರ ರೂ. ಅವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ಗೊತ್ತಿದ್ದರೂ ಪೊಲೀಸ್ ಇಲಾಖೆ ಮೌನ ವಹಿಸಿದ್ದು ನೋಡಿದರೆ ಬಹುಶಃ ಅವರೂ ಸಾಥ್ ನೀಡುತ್ತಿದ್ದಾರೆ ಎಂಬ ಸಂಶಯ ಮೂಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಗಂಭೀರ ಆರೋಪ ಮಾಡಿದರು.

ನಗರದ ಕಾಗಿನೆಲೆ ರಸ್ತೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ತಡೆಗೆ ಪೊಲೀಸ್ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಬ್ಯಾಡಗಿ ತಾಲೂಕಿನ ಅಂದಾನಿಕೊಪ್ಪ ಕಾಡಿನಲ್ಲಿ, ಕದರಮಂಡಲಗಿಯಲ್ಲಿ ಹಲವೆಡೆ ದೊಡ್ಡ ದೊಡ್ಡ ಇಸ್ಪೀಟ್ ಅಡ್ಡೆಗಳನ್ನು ನಡೆಸಲಾಗುತ್ತಿದೆ. ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡದಿಂದ ಅಲ್ಲಿಗೆ ಬಂದು ಜೂಜಾಡುತ್ತಿದ್ದಾರೆ. ಇತ್ತೀಚೆಗೆ ಅಲ್ಲಿ ನಡೆದಿದ್ದ ಅಕ್ರಮದ ಬಗ್ಗೆ ಫೋಟೋ ಸಹಿತವಾಗಿ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಎಸ್‌ಪಿ ಅವರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರಿದರು.

ಬ್ಯಾಗವಾದಿ ಗ್ರಾಮದ ಅಕ್ರಮ ಯುವತಿಯರ ಸಾಗಣೆ ಜಾಲ ಹಾಗೂ ರಸ್ತೆಗುಂಡಿಗಳ ದುರಸ್ತಿಗಾಗಿ ಬಿಜೆಪಿಯಿಂದ ಹೋರಾಟ ಮಾಡಿದ್ದೇವೆ. ಮಾಧ್ಯಮಗಳೂ ವರದಿ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ನೈತಿಕತೆ ಇದ್ದರೆ ನ್ಯಾಯ ದೊರಕಿಸಬೇಕು ಎಂದರು.

ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ತಹಸೀಲ್ದಾರ್ ಪ್ರತಿಭಟನೆಗೆ ನಿರ್ಬಂಧ ಹೇರಿ ಆದೇಶಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಬಳ್ಳಾರಿ, ಈ ಮೂಲಕ ಕಾಂಗ್ರೆಸ್ ಸರ್ಕಾರ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಜಿಲ್ಲಾಧಿಕಾರಿಯವರು ಈ ಬಗ್ಗೆ ಗಮನ ಹರಿಸಬೇಕು. ಕೂಡಲೇ ಈ ಆದೇಶ ವಾಪಸ್ ಪಡೆಯಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಪಾಲಾಕ್ಷಗೌಡ ಪಾಟೀಲ, ನಾಗೇಂದ್ರ ಕಡಕೋಳ, ಕಲ್ಯಾಣಕುಮಾರ ಶೆಟ್ಟರ, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಚಂದ್ರಪ್ಪ ಹರಿಜನ, ಇತರರಿದ್ದರು.

ಬೆಳೆಹಾನಿ ಪರಿಹಾರಕ್ಕಾಗಿ ಬಿಜೆಪಿಯಿಂದ ಹೋರಾಟ

ಸತತ ಮಳೆಗೆ ಜಿಲ್ಲೆಯಲ್ಲಿ 80 ಸಾವಿರಕ್ಕೂ ಅಧಿಕ ಹೆಕ್ಟೇರ್ ಬೆಳೆ ಹಾನಿಯುಂಟಾಗಿದ್ದು, ಜಿಲ್ಲಾಡಳಿತ ಕೇವಲ 17 ಸಾವಿರ ಹೆಕ್ಟೇರ್ ಎಂದು ವರದಿ ನೀಡಿದೆ. ಅಲ್ಪಸ್ವಲ್ಪ ಪರಿಹಾರ ಕೊಟ್ಟು ಕೈತೊಳೆದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದ್ದು, ರೈತರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ಬಿಜೆಪಿಯಿಂದ ಹೋರಾಟ ರೂಪಿಸಲಾಗುವುದು. ಅತಿವೃಷ್ಟಿಯಿಂದ ಪಾರ ಪ್ರಮಾಣದ ಬೆಳೆ ಹಾನಿ ಆಗಿದೆ. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳೂ ಹಾಳಾಗಿವೆ. ಮೆಕ್ಕೆಜೋಳ, ಸೋಯಾಬಿನ್, ಹತ್ತಿ, ಶೇಂಗಾ, ಸೇರಿ ಹಲವು ಬೆಳೆಗಳು ಹಾಳಾಗಿವೆ. ಈವರೆಗೆ ರೈತರಿಗೆ ಸರ್ಕಾರ ಬೆಳೆಹಾನಿ ಪರಿಹಾರ ಕೊಟ್ಟಿಲ್ಲ. ಈ ಕುರಿತು ಹೋರಾಟ ರೂಪಿಸಲಾಗುವುದು ಎಂದರು ವಿರೂಪಾಕ್ಷಪ್ಪ ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net