

ಹಾವೇರಿ: ಮುಂಬರುವ ಚುನಾವಣೆಯ ಭಾಗವಾಗಿ ಪಕ್ಷದಿಂದ ಆಯೋಜಿಸಿರುವ ವಿಜಯ ಸಂಕಲ್ಪ ರಥಯಾತ್ರೆ, ಮೋರ್ಚಾಗಳ ಸಮಾವೇಶ, ಮತ್ತಿತರ ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮನವಿ ಮಾಡಿದರು.
ಈಗಾಗಲೇ ಬೂತ್ ವಿಜಯ ಅಭಿಯಾನ, ವಿಜಯ ಸಂಕಲ್ಪ ಅಭಿಯಾನ ಯಶಸ್ವಿಯಾಗಿದ್ದು, ಇನ್ನು ಹೆಚ್ಚಿನ ರೀತಿಯಲ್ಲಿ ಮತದಾರರನ್ನು ಸಂಪರ್ಕ ಮಾಡುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೆಲಸಗಳ ಕರಪತ್ರಗಳನ್ನು ಮುಟ್ಟಿಸಿ ಜಾಗೃತಿ ಮೂಡಿಸುವ ಕೆಲಸವನ್ನು ಕಾರ್ಯಕರ್ತರು ಬೂತ್ ಸಮಿತಿ, ಶಕ್ತಿಕೇಂದ್ರ ಮತ್ತು ಮಾಹಾಶಕ್ತಿ ಕೇಂದ್ರದ ಮೂಲಕ ಮಾಡಬೇಕು ಎಂದು ತಿಳಿಸಿದರು.
ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ ಮಾತನಾಡಿ, ಚುನಾವಣೆ ಹೊಸ್ತಿಲಲ್ಲಿ ಇರುವಾಗ ಪದಾಧಿಕಾರಿಗಳು ನಿರಂತವಾಗಿ ಕಾರ್ಯಚಟುವಟಿಕೆಯಲ್ಲಿ ಪಾಲ್ಗೊಂಡು ಸಭೆ, ಸಮಾವೇಶಗಳನ್ನು ಯಶಸ್ವಿಗೊಳಿಸಲು ಸಂಘಟನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಬಸವ ಮತ್ತು ಜಿಲ್ಲಾ ಪ್ರಭಾರಿ ಎನ್.ಎಲ್.ಕಲ್ಲೇಶ ಸಂಘಟನೆಯ ಕುರಿತು ವರದಿ ಪಡೆದರು.
ಸಭೆಯಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿಗಳಾದ ಶಿವರಾಜ ಸಜ್ಜನರ, ಎ.ಎಚ್.ಶಿವಯೋಗಿಸ್ವಾಮಿ, ಪಾಲಾಕ್ಷಗೌಡ ಪಾಟೀಲ, ಡಾ.ಬಸವರಾಜ ಕೇಲಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಈಳಗೇರ, ರುದ್ರೇಶ ಚಿನ್ನಣ್ಣನವರ, ಶಶಿಧರ ಹೊಸಳ್ಳಿ, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ರಥ ಯಾತ್ರೆ ಮತ್ತು ಸಮಾವೇಶದ ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರಗಳ ತಂಡ, ಜಿಲ್ಲಾ ಮಾಧ್ಯಮ ಮತ್ತು ಜಿಲ್ಲಾ ಸಾಮಾಜಿಕ ಜಾಲತಾಣಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.