

ಹಾವೇರಿ: ಮುಂದಿನ ಲೋಕಸಭಾ ಚುನಾವಣೆಗೆ ಬೂತ್ ಮಟ್ಟದಿಂದ ತಯಾರಿ ಮಾಡಬೇಕಿದೆ. ಇದರ ಅಂಗವಾಗಿ ಮೊದಲಿಗೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದಲ್ಲಿ ಪ್ರತಿಯೊಂದು ಬೂತ್‌ನಿಂದ ಕಾರ್ಯಕರ್ತರು ಭಾಗಿಯಾಗುವಂತೆ ಮಾಡೋಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿದರು.
ಇಲ್ಲಿನ ಕಾಗಿನೆಲೆ ರಸ್ತೆಯ ಭಾರತೀಯ ಜನತಾ ಪಾರ್ಟಿಯ ಹಾವೇರಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ಬೂತ್‌ಗೆ ಬಿಎಲ್‌ಎ 2ಗಳನ್ನು ನಿಯೋಜಿಸುವ ಸಲುವಾಗಿ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಮತ್ತು ಬೂತ್ ಮಟ್ಟದಲ್ಲಿ ಪ್ರವಾಸ ಮಾಡಬೇಕು. ಆಯಾ ಸ್ಥಳಗಳಲ್ಲೇ ಬೂತ್ ಸಮಿತಿ ಸಭೆ ನಡೆಸಬೇಕು. ವಿವಿಧ ಮೋರ್ಚಾಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಹಾಗೂ ಮಂಡಲಗಳ ಕಾರ್ಯಕಾರಿ ಸಭೆಗಳನ್ನು ನಡೆಸುವ ಕುರಿತು ಜಿಲ್ಲೆಯ ಪದಾಧಿಕಾರಿಗಳಿಗೆ ಸೂಚಿಸಿದರು.
ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಕಾಂಗ್ರೆಸ್ ಸರ್ಕಾರ ಸುಳ್ಳುಗಳ ಮೇಲೆ ಮನೆ ಕಟ್ಟಿ, ಅದರಲ್ಲಿ ಆಡಳಿತ ನಡೆಸುತ್ತಿದೆ. ಜನರಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ನಂಬಿಸಿ ಜನರಿಗೆ ಮೋಸ ಮಾಡುತ್ತಿದೆ. ಯುವ ನಿಧಿಯ ಹೆಸರಲ್ಲಿ ಪದವೀಧರರಿಗೆ 3,000 ರೂ. ಗೌರವಧನ ಕೊಡುವುದಾಗಿ ಹೇಳಿದ್ದ ಕಾಂಗ್ರೆಸ್ ಈಗ 2023-24ರ ಸಾಲಿನಲ್ಲಿ ತೇರ್ಗಡೆಯಾದವರಿಗೆ ಮಾತ್ರ ಎಂದು ರಾಗ ಎಳೆಯುತ್ತಿದೆ. ಈ ಸರ್ಕಾರ ಕಣ್ಣು, ಕಿವಿ, ಬಾಯಿ ಏನೂ ಇಲ್ಲದ ಸುಳ್ಳುಭೂತದ ಸರ್ಕಾರ ಎಂದು ವಾಗ್ದಾಳಿ ನಡೆಸಿದರು
ಸಭೆಯಲ್ಲಿ ಜಿಲ್ಲಾ ಸಂಘಟನಾ ಪ್ರಭಾರಿ ಕಲ್ಲೇಶ, ಮಾಜಿ ಶಾಸಕ ಶಿವರಾಜ ಸಜ್ಜನರ, ಗವಿಸಿದ್ದಪ್ಪ ದ್ಯಾಮಣ್ಣನವರ, ಕೆ.ಶಿವಲಿಂಗಪ್ಪ, ಭಾರತಿ ಜಂಬಗಿ, ರೂಪಾ ಬಾಕಳೆ, ಮತ್ತಿತರರು ಪಾಲ್ಗೊಂಡಿದ್ದರು.