ಎಂಟೂ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುವೆ; ಸಂಸದ, ಮಾಜಿ ಸಿಎಂ ಬೊಮ್ಮಾಯಿ ಶಪಥ; ನೂತನ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಪದಗ್ರಹಣ ಸಮಾರಂಭ

23 HVR 5 B
Published on

ಹಾವೇರಿ: ರಾಜ್ಯ ಸರ್ಕಾರ ದಿವಾಳಿಯಾಗಿದೆ. ಜನರನ್ನು ದಿವಾಳಿ ಮಾಡಲು ಹೊರಟಿದೆ. ಇದಕ್ಕೆ ಬಿಜೆಪಿ ಪಕ್ಷ ಅವಕಾಶ ಕೊಡುವುದಿಲ್ಲ. ಇನ್ನುಮುಂದೆ ಹೋರಾಟದ ಪರ್ವ ಶುರುವಾಗಲಿದೆ. ನನ್ನ ಲೋಕಸಭಾ ಕ್ಷೇತ್ರದ ಹಾವೇರಿ- ಗದಗ ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ ಬಿಜೆಪಿ ಬಾವುಟ ಹಾರಿಸುವ ಸಂಕಲ್ಪ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಶಪಥ ಮಾಡಿದರು.

ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿಂದಿನ ಸೋಲಿನ ಬಗ್ಗೆ ಯಾರೂ ಚಿಂತಿಸಬೇಡಿ. ಮುಂದೆ ಗೆಲ್ಲುವ ಬಗ್ಗೆ ಯೋಚಿಸಿ. ವಿಧಾನಸಭೆಯ ಒಳಗೆ ನಮ್ಮ ಶಾಸಕರು ಹೋರಾಡಿದರೆ, ನಾವು ವಿಧಾನಸಭೆಯ ಹೊರಗೆ ಹೋರಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಮಾತನಾಡಿ, ರಾಜ್ಯದಲ್ಲಿ ಇರುವುದು ಕಮಿಷನ್ ಸರ್ಕಾರ. ಭ್ರಷ್ಟ ಸರ್ಕಾರ. ಕಾಂಗ್ರೆಸ್ ಶಾಸಕರಾದ ಬಿ.ಆರ್ ಪಾಟೀಲ, ರಾಜು ಕಾಗೆ, ಬಸವರಾಜ ರಾಯರೆಡ್ಡಿ ತಮ್ಮದೇ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ. ಕಂದಾಯ ಸಚಿವರು, ‘ನೀನು ತಿಂಗಳಿಗೆ ಎಷ್ಟು ವಸೂಲಿ ಮಾಡುತ್ತೀಯಾ’ ಎಂದು ತಹಸೀಲ್ದಾರ್‌ಗೆ ಕೇಳುತ್ತಾರೆ. ಎಸ್‌ಸಿ, ಎಸ್‌ಟಿ, ಹಿಂದುಳಿದವರಿಗೆ ಮಾತ್ರ ಮೀಸಲಾತಿ ಎಂದು ಅಂಬೇಡ್ಕರ್ ಬರೆದಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ಹೆಚ್ಚಿಸುವ ಮೂಲಕ ಟಿಪ್ಪು ಸಂಸ್ಕೃತಿ ಹೇರಲು ಹೊರಟಿದ್ದಾರೆ. ಇಂಥವರು ದಲಿತರ ಬಗ್ಗೆ ಪಾಠ ಹೇಳುತ್ತಾರೆ ಎಂದು ಲೇವಡಿ ಮಾಡಿದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಎರಡು ವರ್ಷದಿಂದ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಂತಹ ಅನಿಷ್ಠ ಸರ್ಕಾರವನ್ನು ಎಂದಿಗೂ ನೋಡಿರಲಿಲ್ಲ. ವಾಲ್ಮೀಕಿ ನಿಗಮದ 187 ಕೋಟಿ ರೂ. ಲೂಟಿ ಮಾಡಿ ತೆಲಂಗಾಣ ಚುನಾವಣೆಗೆ ಬಳಸಿದ್ದಾರೆ. ಲಜ್ಜೆಗೆಟ್ಟ ಸರ್ಕಾರ ಇದು. ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ನೇರವಾಗಿ ಆರೋಪಿಸಿದ್ದಾರೆ. ಇದನ್ನು ಬಿಜೆಪಿ ಕಾರ್ಯಕರ್ತರು ಜನರಿಗೆ ತಿಳಿಸಬೇಕು. ಜಿಪಂ, ತಾಪಂ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವ ಬಿ.ಸಿ ಪಾಟೀಲ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ರಾಜುಗೌಡ, ಡಿ.ಎಂ ಸಾಲಿ, ಡಾ.ಬಸವರಾಜ ಕೇಲಗಾರ, ಭರತ ಬೊಮ್ಮಾಯಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಶೋಭಾ ನಿಸ್ಸಿಮಗೌಡ್ರ, ಭಾರತಿ ಜಂಬಗಿ, ಸಿದ್ದರಾಜ ಕಲಕೋಟಿ, ಭೋಜರಾಜ ಕರೂದಿ, ಸಂತೋಷಕುಮಾರ ಪಾಟೀಲ, ಪರಮೇಶಪ್ಪ ಮೇಗಳಮನಿ, ಶಶಿಕಲಾ ರಾಮು ಮಾಳಗಿ, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ವೆಂಕಟೇಶ ನಾರಾಯಣಿ, ಇತರರು ಇದ್ದರು.

ಕೋಟ್:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವವನ್ನು ಸರ್ವನಾಶ ಮಾಡಿದೆ. ರೈತರು, ದೀನದಲಿತರು, ವಿಪಕ್ಷದವರ ಹೋರಾಟಕ್ಕೆ ಅನುಮತಿ ಇಲ್ಲ. ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಯಾರಾದರೂ ಸರ್ಕಾರದ ವಿರುದ್ಧ ಮಾತನಾಡಿದರೆ ಕೇಸ್ ಮಾಡುತ್ತಾರೆ. ಪೊಲೀಸ್ ಠಾಣೆಗಳು ದಲ್ಲಾಳಿ ಕೇಂದ್ರಗಳಾಗಿವೆ. ಯಾವುದಕ್ಕೂ ಬಿಜೆಪಿ ಕಾರ್ಯಕರ್ತರು ಜಗ್ಗಲ್ಲ. ಕಾಂಗ್ರೆಸ್ ವಿರುದ್ಧ ಹೋರಾಟ ಚುರುಕು ಪಡೆಯುತ್ತದೆ.

- ಬಸವರಾಜ ಬೊಮ್ಮಾಯಿ, ಸಂಸದ

ಗ್ಯಾಂಗ್ ರೇಪ್ ಕೇಸ್ ಮುಚ್ಚಿ ಹಾಕುವ ಹುನ್ನಾರ ?

ಜಿಲ್ಲೆಯಲ್ಲಿ ಎಂಟು ನೀರಾವರಿ ಯೋಜನೆ, ಯುಟಿಪಿ, ಮೆಡಿಕಲ್, ಇಂಜಿನಿಯರಿಂಗ ಕಾಲೇಜ್‌ಗಳು, ಹಾಲು ಒಕ್ಕೂಟ, ಮೆಗಾ ಡೇರಿ ನಮ್ಮ ಸರ್ಕಾರದಲ್ಲಿ ಆಗಿದೆ. ಸಿದ್ದರಾಮಯ್ಯ ಸರ್ಕಾರ ಜಿಲ್ಲೆಗೆ ಶೂನ್ಯ ಕೊಡುಗೆ ನೀಡಿದೆ. ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಡ್ರಗ್, ಗಾಂಜಾ ಹೆಚ್ಚಾಗಿದೆ. ಹಾನಗಲ್ಲ ತಾಲೂಕಿನಲ್ಲಿ ಗ್ಯಾಂಗ್‌ರೇಪ್ ಕೇಸ್‌ನ ಆರೋಪಿಗಳಿಗೆ ಜಾಮೀನು ಕೊಡಿಸಿ ಕೇಸ್ ಮುಚ್ಚಿ ಹಾಕಲು ದೊಡ್ಡ ಡೀಲ್ ಆಗಿದೆ. ಪೊಲೀಸರೇ ಶಾಮೀಲಾಗಿದ್ದಾರೆ. ಹೋಟೆಲ್ ಹೊಲ, ಅರಣ್ಯದಲ್ಲಿ ಇಸ್ಪೀಟ್ ಆಡಿಸುತ್ತಿದ್ದಾರೆ. ಸವಣೂರ ತಾಲೂಕು ಯಲವಗಿ ಗ್ರಾಮದಲ್ಲಿ ಒಬ್ಬರು ಲೇಔಟ್ ಮಾಡಿದ್ದಾರೆ. ಅಲ್ಲಿ ಒಂದು ಸೈಟ್‌ಗೆ ಇಷ್ಟು ಲಂಚ ಕೊಡುವಂತೆ ಉಪನೋಂದಣಾಧಿಕಾರಿ ಬೇಡಿಕೆ ಇಟ್ಟಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು.

ಡಿಕೆಶಿ ಸಿಎಂ ಆದರೆ ಆರು ತಿಂಗಳು ಕೂರಲ್ಲ

ಒಂದು ವೇಳೆ ಡಿ.ಕೆ ಶಿವಕುಮಾರ ಮುಖ್ಯಮಂತ್ರಿ ಆದರೆ, ಸಿದ್ದರಾಮಯ್ಯ ಆರು ತಿಂಗಳು ಆ ಕುರ್ಚಿ ಮೇಲೆ ಕುಳಿತುಕೊಳ್ಳಲು ಬಿಡಲ್ಲ. ಯಾಕೆಂದರೆ ನಾವು ಈಗಾಗಲೇ ಅವರನ್ನು ನೋಡಿ ಬಂದಿದ್ದೇವೆ. ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಇಳಿದರೆ ನೀರಿನಿಂದ ಮೀನು ಹೊರ ಬಂದಂತಾಗುತ್ತದೆ. ವಿಪಕ್ಷ ನಾಯಕರಾಗಲೂ ಸಾಧ್ಯವಿಲ್ಲ. ಹಾಗಾಗಿ, ಆದಷ್ಟು ಬೇಗ ಡಿಕೆಶಿ ಮುಖ್ಯಮಂತ್ರಿ ಆಗಲಿ ಎಂದು ಮಾಜಿ ಸಚಿವ ಬಿ.ಸಿ ಪಾಟೀಲ ಹರಸಿದರು.

ಕೋಟ್:

ಈ ಸರ್ಕಾರ ಬೀಳುವ ಹಂತದಲ್ಲಿದೆ. ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದನ್ನು ಸರಿಯಾಗಿ ಬಳಸಿಕೊಂಡು ಬಿಜೆಪಿ ಅಧಿಕಾರಕ್ಕೆ ತರಬೇಕಿದೆ. ಹಳೆಯದನ್ನು ಬಿಟ್ಟುಬಿಡಿ. ಬೊಮ್ಮಾಯಿ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಪಕ್ಷ ಬೆಳೆಸೋಣ. ವಿರುಪಾಕ್ಷಪ್ಪ ಬಳ್ಳಾರಿ ಅವರಿಗೆ ಸುಮ್ಮನೆ ಅಧ್ಯಕ್ಷಗಿರಿ ಕೊಟ್ಟಿಲ್ಲ. ಹಾಗೆ ಅಣ್ಣ ಅಣ್ಣ ಎಂದು ಕರೆಸಿಕೊಂಡು ಓಡಾಡಲು ಅಲ್ಲ. ಮುಂದಿನ ಸಲ ವಿಧಾನಸಭೆಗೆ ಬರುವಾಗ ಆರು ಶಾಸಕರನ್ನು ಕರೆತರಬೇಕು ಎಂದು ಆಯ್ಕೆ ಮಾಡಲಾಗಿದೆ.

- ಆರ್.ಅಶೋಕ, ವಿಧಾನಸಭೆ ವಿಪಕ್ಷ ನಾಯಕ

ಕೋಟ್:

ಬಿಜೆಪಿ ಪಕ್ಷ ನನಗೆ ಬಹುದೊಡ್ಡ ಜವಾಬ್ದಾರಿ ಕೊಟ್ಟಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಜನ ಬೇಸತ್ತಿದ್ದಾರೆ. ನಮ್ಮ ಎಲ್ಲ ಕಾರ್ಯಕರ್ತರು ಕೈಜೋಡಿಸಿದರೆ ಮುಂಬರುವ ಜಿಪಂ, ತಾಪಂ, ವಿಧಾನಸಭೆ ಸೇರಿ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಕ್ತ ಜಿಲ್ಲೆ ಮಾಡಬಹುದು. ಎಲ್ಲರೂ ಒಂದಾಗಿ ಪಕ್ಷ ಸಂಘಟನೆ ಮಾಡೋಣ.

- ವಿರುಪಾಕ್ಷಪ್ಪ ಬಳ್ಳಾರಿ, ಬಿಜೆಪಿ ನೂತನ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net