

ಕೇಶವಮೂರ್ತಿ ವಿ.ಬಿ. ಹಾವೇರಿ
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಕೆಲ ಕ್ಷೇತ್ರಗಳಲ್ಲಿ ಉಂಟಾಗಿದ್ದ ಬಂಡಾಯ ಶಮನ ಮಾಡುವಲ್ಲಿ ಕಾಂಗ್ರೆಸ್, ಬಿಜೆಪಿ ಮುಖಂಡರು ಕೊನೆಗೂ ಯಶಸ್ವಿಯಾಗಿದ್ದು, ಸೂಕ್ತ ಸ್ಥಾನಮಾನದ ಭರವಸೆ ಹಿನ್ನೆಲೆಯಲ್ಲಿ ಬಹುತೇಕ ಅಭ್ಯರ್ಥಿಗಳು ಬಂಡಾಯ ಕೈಬಿಟ್ಟು ಪಕ್ಷದ ಅಭ್ಯರ್ಥಿ ಬೆನ್ನಿಗೆ ನಿಂತಿದ್ದಾರೆ.
ಹಾವೇರಿ, ಶಿಗ್ಗಾಂವಿ- ಸವಣೂರ, ರಾಣೆಬೆನ್ನೂರ ಕ್ಷೇತ್ರಗಳಲ್ಲಿ ಹಲವರು ಪಕ್ಷದಿಂದ ಟಿಕೆಟ್ ಸಿಗದ ಕಾರಣಕ್ಕೆ ಕಾಂಗ್ರೆಸ್, ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದರು. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಕೆಲವರು ವೈಯಕ್ತಿಕ ವರ್ಚಸ್ಸು ಹೊಂದಿದ್ದರೆ, ಮತ್ತೆ ಕೆಲವರು ಯಾವುದೇ ವರ್ಷಸ್ಸು ಇಲ್ಲದವರೂ ಇದ್ದರು. ಆದರೆ, ಫಲಿತಾಂಶದ ವೇಳೆ ಒಂದೊಂದು ಮತವೂ ಮಹತ್ವ ಪಡೆಯುವುದರಿಂದ ಬಂಡಾಯ ಅಭ್ಯರ್ಥಿಗಳ ಮನವೊಲಿಸುವುದು ಆಯಾ ಪಕ್ಷಗಳಿಗೆ ತೀರಾ ಅನಿವಾರ್ಯವಾಗಿತ್ತು.
ಇದೇ ಕಾರಣಕ್ಕೆ ಬಂಡಾಯ ವಾಪಸ್ ಪಡೆಯುವಂತೆ ಮಾಡಿ ಎಂದು ಕಾಂಗ್ರೆಸ್, ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸ್ಪಷ್ಟ ಸೂಚನೆ ನೀಡಿತ್ತು. ಹಾಗಾಗಿ, ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾಗುತ್ತಿದ್ದಂತೆ ರಾಜ್ಯ ಮಟ್ಟದ ನಾಯಕರು ಬಂಡಾಯಗಾರರ ಮನವೊಲಿಸಲು ಮುಂದಾಗಿದ್ದರು.
ಕಾಂಗ್ರೆಸ್ ಪಕ್ಷದ ಹಲವು ಬಂಡಾಯ ಅಭ್ಯರ್ಥಿಗಳನ್ನು ಬೆಂಗಳೂರಿಗೆ ಕರೆಸಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ವೈಯಕ್ತಿಕವಾಗಿ ಮಾತುಕತೆ ನಡೆಸಿ ಬಂಡಾಯ ಶಮನಗೊಳಿಸಿದ್ದಾರೆ. ಮತ್ತೆ ಕೆಲವರನ್ನು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಖುದ್ದು ಭೇಟಿಯಾಗಿ ಮಾತನಾಡಿ ಸಮಾಧಾನಪಡಿಸಿದ್ದಾರೆ. ಸರ್ಕಾರ ರಚನೆಯಾದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ.
ಇನ್ನು ಬಿಜೆಪಿ ಬಂಡಾಯ ಅಭ್ಯರ್ಥಿಗಳ ಮನವೊಸಲಿಸಲು ಖುದ್ದು ಮುಖ್ಯಮಂತ್ರಿಯವರೇ ವಿಶೇಷ ಮುತುವರ್ಜಿ ವಹಿಸಿದ್ದರು. ತವರು ಜಿಲ್ಲೆಯ ಬಂಡಾಯ ಅಭ್ಯರ್ಥಿಗಳಿಗೆ ದೂರವಾಣಿ ಕರೆ ಮಾಡಿ, ಮತ್ತೆ ಕೆಲವರನ್ನು ನೇರವಾಗಿ ಭೇಟಿಯಾಗಿ ಮನವೊಲಿಸಿ, ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಮಾಡಲು ಸಫಲರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಪಕ್ಷದ ಮತಗಳು ಪಕ್ಷಕ್ಕೆ ಉಳಿಯಲಿವೆ ಎಂಬ ಲೆಕ್ಕಾಚಾರ ಅಡಗಿದೆ.
ಆಮಿಷದ ಬಲೆಗೆ
ಪಕ್ಷದ ವರಿಷ್ಠರು, ನಾಯಕರ ಸ್ಥಾನಮಾನದ ಭರವಸೆಗೆ ಕೆಲವರು ಮಣಿದರೆ ಮತ್ತೆ ಕೆಲವರು ಹಣದ ಆಮಿಷಕ್ಕೆ ಒಳಗಾಗಿದ್ದಾರೆ. ಕೆಲ ವರ್ಷಗಳಿಂದ ಪ್ರಬಲ ಆಕಾಂಕ್ಷಿ ಎಂದು ಓಡಾಡಿಕೊಂಡಿದ್ದ ಕೆಲವರು ಲಕ್ಷ, ಕೋಟಿಗಟ್ಟಲೇ ಹಣ ಖರ್ಚು ಮಾಡಿದ್ದಾರೆ. ಖರ್ಚು ಮಾಡಿದ ಹಣವನ್ನು ಚುಕ್ತಾ ಮಾಡಿದರೆ ಕಣದಿಂದ ಹಿಂದೆ ಸರಿಯುವುದಾಗಿ ಕೆಲವರು ಬೇಡಿಕೆ ಇಟ್ಟಿದ್ದರು. ಅಧಿಕೃತ ಅಭ್ಯರ್ಥಿ ಸೇರಿದಂತೆ ಮುಖಂಡರು ಇದಕ್ಕೆ ಒಪ್ಪಿದ ಬಳಿಕವೇ ಅವರು ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಬಲ್ಲ ಮೂಲಗಳು ಸ್ಪಷ್ಟಪಡಿಸಿವೆ.
ಸಂತೋಷ ಪಾಟೀಲ ಬಾಕಿ
ರಾಣೆಬೆನ್ನೂರ ಕ್ಷೇತ್ರದ ಬಿಜೆಪಿ ಟಿಕೆಟ್ ಕೇಳಿದ್ದ ಸಂತೋಷಕುಮಾರ ಪಾಟೀಲ ಕೊನೆಗೂ ಪಕ್ಷೇತರರಾಗಿ ಸ್ಪರ್ಧೆ ಎದುರಿಸುತ್ತಿದ್ದಾರೆ. ಈ ಮೊದಲೇ ಸ್ವತಂತ್ರರಾಗಿ ನವಯುಗ ಹೆಸರಲ್ಲಿ ಪ್ರಚಾರ ಆರಂಭಿಸಿದ್ದ ಸಂತೋಷ, ವೈಯಕ್ತಿಕ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದರು. ಟಿಕೆಟ್ ಸಿಗದಿದ್ದರೂ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದರು. ಕೆಲವರು ಮನವೊಲಿಸಲು ಯತ್ನಿಸಿದರೂ ಯಶ ಕಾಣಲಿಲ್ಲ. ಇವರು ಕೆಲವೊಂದಷ್ಟು ಬಿಜೆಪಿಯ ಮತಗಳನ್ನು ಸೆಳೆಯಬಲ್ಲರು. ಇದರಿಂದ ಬಿಜೆಪಿ ಅಭ್ಯರ್ಥಿಗೆ ಹಾನಿಯಾದರೂ ಅಚ್ಚರಿ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.