

ಹಾವೇರಿ: ಶಹರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಸ್ತೆ, ಕುಡಿಯುವ ನೀರು ಪೂರೈಕೆ ಹಾಗೂ ಯುಜಿಡಿ ಸಮಸ್ಯೆ ಬಗೆಹರಿಸುವುದು ನನ್ನ ಮೊದಲ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದು, ಜನರ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದು ಹಾವೇರಿ ಬಿಜೆಪಿ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣವರ ಹೇಳಿದರು.
ನಗರದ ಕಾಗಿನೆಲೆ ರಸ್ತೆಯ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2003ರಲ್ಲಿ ಹಾವೇರಿ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಎಫ್‌ಡಿಎ ನೌಕರನಾಗಿ ಸೇವೆ ಆರಂಭಿಸಿದೆ. 2013ರಿಂದ 2021ರವರೆಗೆ ಹಾವೇರಿ, ಗುತ್ತಲದ ಉಪ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸಿ, 2021ರಲ್ಲಿ ಬ್ಯಾಡಗಿ ತಹಸೀಲ್ದಾರ್ ಆಗಿ ಭಡ್ತಿ ಪಡೆದುಕೊಂಡೆ. ಈ ಸಂದರ್ಭದಲ್ಲಿ ಕಚೇರಿಗೆ ಬರುವ ಎಲ್ಲರ ಕೆಲಸವನ್ನೂ ತ್ವರಿತವಾಗಿ ಮಾಡಿಕೊಟ್ಟಿದದೇನೆ. ಇದೇ ಕಾರಣಕ್ಕೆ ಜನ ನನ್ನನ್ನು ಇಷ್ಟಪಡುತ್ತಾರೆ. ಇದೇ ವಿಶ್ವಾಸವಿಟ್ಟು ಪಕ್ಷ ಹಾಗೂ ಆರ್‌ಎಸ್‌ಎಸ್ ಹಿರಿಯರು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರು.
ಟಿಕೆಟ್ ವಂಚಿತರಾದ ವೆಂಕಟೇಶ ನಾರಾಯಣಿ, ಕೆ.ಬಿ.ಮಲ್ಲಿಕಾರ್ಜುನ, ಪರಮೇಶ್ವರಪ್ಪ ಮೇಗಳಮನಿ ಅವರ ಜತೆ ಮಾತನಾಡಿದ್ದೇನೆ. ಶಾಸಕ ಓಲೇಕಾರ ಜತೆ ಮಾತನಾಡಿಲ್ಲ. ಪಕ್ಷದ ಸೂಚನೆಯಂತೆ ನಡೆದುಕೊಳ್ಳುವೆ ಎಂದರು.
ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ರಾಣೆಬೆನ್ನೂರಿನ ಆರ್.ಶಂಕರ, ಸಂತೋಷ ಪಾಟೀಲ ಬಿಟ್ಟರೆ ಬೇರೆಲ್ಲೂ ಬಂಡಾಯದ ಆತಂಕವಿಲ್ಲ. ಗವಿಸಿದ್ದಪ್ಪ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದ್ದಾರೆ. ಸರ್ಕಾರಿ ನೌಕರರು ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಂತಹ ಕಳಂಕ ಇಲ್ಲದ ವ್ಯಕ್ತಿಯನ್ನು ಪಕ್ಷ ಆಯ್ಕೆ ಮಾಡಿದೆ. ಏ.19ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ದೆಹಲಿ ವೀಕ್ಷಕ, ಕ್ಷೇತ್ರದ ಪ್ರಭಾರಿ ವಿಜಯ ಸೋಳಂಕಿ, ಹಾವೇರಿ ಗ್ರಾಮೀಣ ಮಂಡಲ ಅಧ್ಯಕ್ಷ ಬಸವರಾಜ ಕಳಸೂರ, ನಗರ ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ಶಶಿಧರ ಹೊಸಳ್ಳಿ, ಇತರರಿದ್ದರು.
ರಾಜ್ಯಾಧ್ಯಕ್ಷರಿಗೆ ವರದಿ
ಶಾಸಕ ನೆಹರು ಓಲೇಕಾರ ಹೇಳಿಕೆಗಳು ಹಾಗೂ ನಡೆ ಕುರಿತು ರಾಜ್ಯಾಧ್ಯಕ್ಷರಿಗೆ ವರದಿ ಸಲ್ಲಿಸಲಾಗಿದೆ. ಅವರ ಟಿಕೆಟ್ ತಪ್ಪುವಲ್ಲಿ ನನ್ನ ಪಾತ್ರವಿಲ್ಲ. ಘಟಕದಿಂದ 11 ಜನರ ಹೆಸರು ಕೊಟ್ಟಿದ್ದೆ. ಮೊದಲಿಗೆ ಓಲೇಕಾರ ಅವರ ಹೆಸರಿತ್ತು ಎಂದು ಕಲಕೋಟಿ ಹೇಳಿದರು.