

ಹಾವೇರಿ: ಬಿಸಿಯೂಟ ಅಡುಗೆ ತಯಾರಕರಿಗೆ 6 ಸಾವಿರ ರೂ. ವೇತನ ನೀಡುವುದು, ಪಿಎಫ್, ಇಎಸ್‌ಐ ಸೌಲಭ್ಯದ ಜತೆಗೆ ನೌಕರಿ ಕಾಯಂಗೊಳಿಸುವ ಮೂಲಕ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿರುವ ಅಹೋರಾತ್ರಿ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 6ನೇ ಗ್ಯಾರಂಟಿಯಾಗಿ ಅಡುಗೆ ತಯಾರಕರಿಗೆ 6 ಸಾವಿರ ರೂ. ವೇತನ ನೀಡಲಾಗುವುದು ಎಂದು ಇತ್ತೀಚೆಗೆ ಜರುಗಿದ ಖಾನಾಪುರದ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದ್ದರು. ಇದೀಗ ಕಾಂಗ್ರೆಸ್ ಸರ್ಕಾರ ಬಂದು ಆರು ತಿಂಗಳಾಗಿದ್ದು, ಈ ಕೂಡಲೇ ಸಿದ್ದರಾಮಯ್ಯನವರು 6 ಸಾವಿರ ರೂ. ವೇತನ ಘೋಷಿಸಬೇಕು.
ಬಿಸಿಯೂಟ ಯೋಜನೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ಕೈಬಿಡಬೇಕು. ಮುಖ್ಯೋಪಾಧ್ಯಾಯರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರ ಜಂಟಿ ಖಾತೆ ಮಾಡುವ ಆದೇಶ ಕೈಬಿಟ್ಟು ಹಿಂದಿನಂತೆ ಮುಖ್ಯೋಪಾಧ್ಯಾಯರು ಹಾಗೂ ಮುಖ್ಯ ಅಡುಗೆಯವರ ಜಂಟಿ ಖಾತೆಯನ್ನೇ ಮುಂದುವರೆಸಬೇಕು. ಏಪ್ರಿಲ್ 10ರ ಮೊದಲು ಕೆಲಸ ಮಾಡುತ್ತಿದ್ದವರನ್ನೇ ಮುಂದುವರೆಸಬೇಕೆಂಬ ಆದೇಶವಿದ್ದರೂ ಆಯುಕ್ತರು ಮಾರ್ಚ್ 31ಕ್ಕೆ ಅಡುಗೆಯವರನ್ನು ಬಿಡುಗಡೆಗೊಳಿಸಿ, ಪುನಃ ಜೂನ್ 1ಕ್ಕೆ ನೇಮಕಾತಿ ಮಾಡಿಕೊಳ್ಳುವಂತೆ ಆದೇಶ ಮಾಡಿರುವುದನ್ನು ಹಿಂಪಡೆಯಬೇಕು.
2002-03ರಲ್ಲೇ ಆರಂಭವಾಗಿರುವ ಬಿಸಿಯೂಟ ಯೋಜನೆಯ ನೌಕರರನ್ನು ಕಾಯಂಗೊಳಿಸಿ ಸೇವಾ ಭದ್ರತೆ ಒದಗಿಸಬೇಕು. ಹಾನಗಲ್ಲ ತಾಲೂಕು ಕಾಡಶೆಟ್ಟಿಹಳ್ಳಿ ಗ್ರಾಮದ ವಿ.ಆರ್.ಪಾಟೀಲ ಪ್ರೌಢಶಾಲೆಯಲ್ಲಿ 15 ವರ್ಷಗಳಿಂದ ಅಡುಗೆ ಮಾಡುತ್ತಿದ್ದ ನಿರ್ಮಲಾ ದೊಡ್ಡಮನಿ ಫೆ.10ರಂದು ಅಡುಗೆ ಮಾಡುವಾಗ ಕುಸಿದು ಬಿದ್ದು ಮೃತಪಟ್ಟಿದ್ದರು. ಇವರಿಗೆ ಮುಖ್ಯಮಂಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ. ಪರಿಹಾರ ಕೊಡಬೇಕು. ಅವರ ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು. ಕಳೆದ ಬಜೆಟ್‌ನಲ್ಲಿ 1,000 ರೂ. ಸಂಬಳ ಹೆಚ್ಚಳ ಮಾಡುವುದಾಗಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಅದನ್ನು ಜೂನ್‌ನಿಂದ ಅನ್ವಯವಾಗುವಂತೆ ಜಾರಿಗೊಳಿಸಬೇಕು. ಸುರಕ್ಷಾ ಕಿಟ್ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಫೆಡರೇಶನ್‌ನ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಜಿಲ್ಲಾಧ್ಯಕ್ಷ ಜೆ.ಡಿ.ಪೂಜಾರ, ಸಂಘಟನಾ ಕಾರ್ಯದರ್ಶಿ ವಿನಾಯಕ ಕುರುಬರ, ಸವಣೂರ ತಾಲೂಕು ಸಮಿತಿ ಅಧ್ಯಕ್ಷೆ ಲಲಿತಾ ಬುಶೆಟ್ಟಿ, ರಾಣೆಬೆನ್ನೂರ ಅಧ್ಯಕ್ಷೆ ರಾಜೇಶ್ವರಿ ದೊಡ್ಡಮನಿ, ಹಾವೇರಿ ಅಧ್ಯಕ್ಷೆ ರೇಖಮ್ಮ ದನ್ನೂರ, ಬ್ಯಾಡಗಿ ಅಧ್ಯಕ್ಷೆ ಸರೋಜಮ್ಮ ಹಿರೇಮಠ, ಹಿರೇಕೆರೂರ, ರಟ್ಟಿಹಳ್ಳಿ ತಾಲೂಕು ಅಧ್ಯಕ್ಷೆ ಲತಾ ಹಿರೇಮಠ, ಹಾನಗಲ್ಲ ಅಧ್ಯಕ್ಷೆ ನಿರ್ಮಲಾ ಬಂಕಾಪುರಮಠ, ಭಾರತಿ ಕುಬನೂರ, ಸೇರಿದಂತೆ ನೂರಾರು ಬಿಸಿಯೂಟ ಕಾರ್ಯಕರ್ತರು ಇದ್ದರು.