

ಹಾವೇರಿ: ಕೋವಿಡ್ ಸಂದರ್ಭದಲ್ಲಿ ಹಾವೇರಿ ತಾಲೂಕಿನ 98 ಅಡುಗೆ ಸಿಬ್ಬಂದಿಯ ಎರಡು ತಿಂಗಳ ಸಂಬಳ ಖಾತೆಗೆ ಜಮೆ ಮಾಡಿ ನಂತರ ಡಬಲ್ ಆಗಿದೆ ಎಂದು ವಾಪಸ್ ಪಡೆದ ಕುರಿತು ಸಮಗ್ರ ತನಿಖೆಯಾಗಬೇಕು. ಸ್ಥಳಕ್ಕೆ ಹಾವೇರಿ ಸಹಾಯಕ ನಿರ್ದೇಶಕರು (ಎಡಿಪಿ) ಸೇರಿದಂತೆ ಜಿಲ್ಲೆಯ ಎಲ್ಲ ಸಹಾಯಕ ನಿರ್ದೇಶಕರು ಬರಬೇಕು ಎಂದು ಬಿಸಿಯೂಟ ತಯಾರಕರ ಫೆಡರೇಶನ್ ಪಟ್ಟು ಹಿಡಿದಿದೆ.
ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಬಿಸಿಯೂಟ ತಯಾರಕರಿಗೆ 6 ಸಾವಿರ ರೂ. ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಡಿಸಿ ಕಚೇರಿ ಬಳಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಘದ ಜಿಲ್ಲೆಯ ಸದಸ್ಯರ ಅಹೋರಾತ್ರಿ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ಬಿಸಿಯೂಟ ನೌಕರರ ಕೋವಿಡ್ ಸಂದರ್ಭದ ಎರಡು ತಿಂಗಳ ಸಂಬಳದಲ್ಲಿ ಅನ್ಯಾಯ ಉಂಟಾಗಿದೆ. ಈ ಸಮಸ್ಯೆಗ ಕುರಿತು ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಐದು ದಿನದಿಂದ ಪ್ರತಿಭಟನೆ ನಡೆಯುತ್ತಿದ್ದರೂ ಯಾವೊಬ್ಬ ಜನಪ್ರತಿನಿಧಿಯೂ ಸ್ಥಳಕ್ಕೆ ಆಗಮಿಸಿ, ಅಹವಾಲು ಆಲಿಸಿಲ್ಲ. ಸಮಸ್ಯೆ ಬಗೆಹರಿಸುವ ಕುರಿತು ಯಾವೊಬ್ಬ ಅಧಿಕಾರಿಯೂ ಭರವಸೆ ನೀಡುತ್ತಿಲ್ಲ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಅಧಿವೇಶನ ಸ್ಥಳದಲ್ಲಿ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಫೆಡರೇಶನ್ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಫೆಡರೇಶನ್ ಜಿಲ್ಲಾ ಸಮಿತಿ ಅಧ್ಯಕ್ಷ ಜಿ.ಡಿ.ಪೂಜಾರ, ವಿನಾಯಕ ಕುರುಬರ, ಲಲಿತಾ ಬುಶೆಟ್ಟಿ, ರಾಜೇಶ್ವರಿ ದೊಡ್ಡಮನಿ, ರೇಖಮ್ಮ ದನ್ನೂರ, ಸರೋಜಮ್ಮ ಹಿರೇಮಠ, ಲಲಿತಾ ಹಿರೇಮಠ, ಭಾರತಿ ಕಬನೂರ, ಸೇರಿದಂತೆ 500ಕ್ಕೂ ಅಧಿಕ ಅಡುಗೆ ಸಿಬ್ಬಂದಿ ಹಾಜರಿದ್ದರು.