

ಹಾವೇರಿ: ಜಿಲ್ಲೆಯಲ್ಲಿ 2019-2022ನೇ ಸಾಲಿನ ಬಾಕಿ ವಿಮೆ ಹಣವನ್ನು ಕೂಡಲೇ ಸಂಬಂಧಿಸಿದ ರೈತರ ವಾರಸದಾರರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವಂತೆ ಒತ್ತಾಯಿಸಿ ಭೂಮಿಪುತ್ರ ರೈತ ಸಂಘದ ಪದಾಧಿಕಾರಿಗಳು ಹಾವೇರಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
2019-2022 ಸಾಲಿನಲ್ಲಿ ವಿವಿಧ ಬೆಳೆಗಳಿಗೆ ರೈತರು ಕಟ್ಟಿದ್ದ ವಿಮೆ ಹಣ ಮಂಜೂರಾಗಿದೆ. ಆದರೆ, ವಿಮೆ ಜಮಾ ಮಾಡಿದ ರೈತರಲ್ಲಿ ಕೆಲವರು ಮೃತಪಟ್ಟ ಹಿನ್ನೆಲೆಯಲ್ಲಿ ಅವರಿಗೆ ಮಂಜೂರಾಗಿರುವ ವಿಮಾ ಹಣವನ್ನು ತಡೆಹಿಡಿಯಲಾಗಿದೆ. ವಿಮೆ ಜಮಾ ಮಾಡಿದ ತಂದೆ, ತಾಯಿ, ಅಣ್ಣ, ತಮ್ಮ ಮಾಲೀಕತ್ವದ 118ಕ್ಕೂ ಹೆಚ್ಚು ರೈತರು ಮೃತಪಟ್ಟ ಕಾರಣ ಹೇಳಿ ಕೃಷಿ ಇಲಾಖೆಯ ಅಧಿಕಾರಿಗಳು ವಿಮೆಯ ಹಣ ಕೊಡಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಸರ್ಕಾರವೇ ಇದನ್ನು ಸರಿಪಡಿಸಿಕೊಡಬೇಕು ಎನ್ನುತ್ತಿದ್ದಾರೆ. ನ್ಯಾಯಯುತವಾಗಿ ಬಿಡುಗಡೆಯಾದ ವಿಮೆ ಹಣವನ್ನು ವಾರಸಾದಾರರ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಡಲು ಆದೇಶಿಸಬೇಕೆಂದು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಆಗ್ರಹಿಸಿದರು. ವಾರದೊಳಗೆ ಹಣ ಜಮೆ ಮಾಡದಿದ್ದಲ್ಲಿ, ಆ.15ರಂದು ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ಭೂಮಿಪುತ್ರ ರೈತ ಸಂಘದ ಅಧ್ಯಕ್ಷ ಫಕ್ಕೀರಗೌಡ ಗಾಜಿಗೌಡ್ರ, ಕಾರ್ಯದರ್ಶಿ ಸಂಗಮೇಶ ನಾಗನೂರ, ಗುಡ್ಡಪ್ಪ ಕಳಸಪ್ಪನವರ, ಫಕ್ಕೀರಪ್ಪ ಒಡೆಯನಪುರ, ರಾಮಪ್ಪ ಲಮಾಣಿ, ನೀಲಪ್ಪ ಹುಲಗಮ್ಮನವರ, ಸರೋಜಮ್ಮ ಕರ್ಜಗಿ, ಶ್ರೀಕಾಂತಗೌಡ ಮುದಿಗೌಡ್ರ, ಬಸಣ್ಣ ಕಜ್ಜರಿ, ಕೆಂಚನಗೌಡ ಕೆಂಚನಗೌಡ್ರ, ರಾಮಪ್ಪ ರಾಮಜ್ಜನವರ, ಗುಡ್ಡಪ್ಪ ಮಾಯಕ್ಕನವರ, ಬಾಬುಸಾಬ ಕನವಳ್ಳಿ, ನಾಗಪ್ಪ ಸಂಗಣ್ಣನವರ, ನಾಗಪ್ಪ ಗುಡುಗುಡಿ, ವಿಜಯ ಕಾಟೇನಹಳ್ಳಿ, ತಿರಕಪ್ಪ ಕಾಟೇನಹಳ್ಳಿ, ಇತರರಿದ್ದರು.