

ಹಾವೇರಿ: ತಾಲೂಕಿನ ಭೂಕೋಡಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಮಳೆ ಬಂದರೆ ಸೋರುತ್ತಿದ್ದು, ಮಕ್ಕಳು ಸೋರುವ ಕೊಠಡಿಗಳಲ್ಲೇ ಕುಳಿತು ಪಾಠ ಕೇಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಮಳೆಯಿಂದ ರಕ್ಷಿಸಿಕೊಳ್ಳುವುದೇ ಮಕ್ಕಳಿಗೆ ದೊಡ್ಡ ಕೆಲಸವಾಗಿದೆ.
ಕನಕಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮ ಜಿಲ್ಲಾ ಕೇಂದ್ರದಿಂದ 6 ಕಿ.ಮೀ. ದೂರದಲ್ಲಿದೆ. 1950ರಲ್ಲಿ ಆರಂಭವಾದ ಈ ಶಾಲೆ ಹಲವು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಇಲ್ಲಿ 1ನೇ ತರಗತಿಯಿಂದ 5ನೇ ತರಗತಿಯವರೆಗೆ 24 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆ ನಿರ್ಮಾಣವಾಗಿ 75 ವರ್ಷವಾದರೂ ಹಳೆಯ ಕಟ್ಟಡದಲ್ಲಿಯೇ ಮಕ್ಕಳು ಪಾಠ ಕೇಳುತ್ತಿದ್ದು, ಜೀವ ಕೈಯಲ್ಲಿ ಹಿಡಿದು ದಿನ ಕಳೆಯುತ್ತಿದ್ದಾರೆ.
ಈ ಸಲ ಮಳೆಗಾಲ ಜೋರಾಗಿದ್ದು, ಎಲ್ಲಿ ಸೋರುತ್ತದೆ ಎಂದು ಗುರುತಿಸಿ ಬಕೆಟ್ ಇಟ್ಟು ಓದುವ ಅನಿವಾರ್ಯತೆ ಮಕ್ಕಳಿಗಿದೆ. ಶಿಕ್ಷಕರಿಗೂ ಮಕ್ಕಳ ಆರೋಗ್ಯದ ಕಾಳಜಿ ವಹಿಸುವ ಜವಾಬ್ದಾರಿ ಇದೆ. ಇದರಿಂದ ಮಕ್ಕಳು ಸರಿಯಾಗಿ ಪಾಠ ಕಲಿಯದಂತಾಗಿದೆ. ಇದು ಪಾಲಕರ, ಗ್ರಾಮಸ್ಥರ ಚಿಂತೆಗೆ ಕಾರಣವಾಗಿದೆ. ಇನ್ನಾದರೂ ಸ್ಥಳೀಯ ಶಾಸಕರು, ಶಿಕ್ಷಣ ಇಲಾಖೆ ನಮ್ಮೂರ ಸರ್ಕಾರಿ ಶಾಲೆಗೆ ಸುಸಜ್ಜಿತ ಕೊಠಡಿ ಒದಗಿಸಿಕೊಡಬೇಕು ಎಂದು ಭೂಕೋಡಿಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.