ನಾಗನೂರ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಅಮಾನತು; ಬಿಇಒ ಮೌನೇಶ ಬಡಿಗೇರ ಆದೇಶ

Published on

ಹಾವೇರಿ: ಬಿಸಿಯೂಟ ಯೋಜನೆಯ ಹಣವನ್ನು ಅನಧಿಕೃತವಾಗಿ ಡ್ರಾ ಮಾಡಿಕೊಂಡಿದ್ದ ಹಾಗೂ ಬಡ್ತಿ ಹೊಂದಿ ಬಂದಿದ್ದ ಮುಖ್ಯ ಶಿಕ್ಷಕರಿಗೆ ಚಾರ್ಜ್ ನೀಡದೇ ಸತಾಯಿಸಿದ ಆರೋಪದಡಿ ತಾಲೂಕಿನ ನಾಗನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಪ್ರತಾಪ ಎಂ. ಬಾರ್ಕಿ ಅವರನ್ನು ಅಮಾನತುಗೊಳಿಸಿ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಆದೇಶ ಹೊರಡಿಸಿದ್ದಾರೆ.

ನಾಗನೂರ ಗ್ರಾಮದ ಸ.ಹಿ.ಪ್ರಾ. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾಗಿ ಪ್ರತಾಪ ಸೇವೆ ಸಲ್ಲಿಸುತ್ತಿದ್ದರು. ಮೇಲಿಂದ ಮೇಲೆ ರಜೆ ಹಾಕುವುದು, ಬಡ್ತಿ ಹೊಂದಿದ ಮುಖ್ಯ ಶಿಕ್ಷಕ ಸಿ.ಆರ್.ಚೂರಿ ಶಾಲೆಗೆ ಹಾಜರಾದರೂ ಅವರಿಗೆ ಚಾರ್ಜ್ ನೀಡದೇ ಕರ್ತವ್ಯಕ್ಕೆ ಗೈರಾಗಿದ್ದ ಆರೋಪ ಕೇಳಿ ಬಂದಿತ್ತು.

ಚೂರಿಯವರು ಶಾಲೆಗೆ ಹಾಜರಾದ ನಂತರ ಗಳಿಕೆ ರಜೆಯ ಮೇಲೆ ತೆರಳಿದ್ದ ವೇಳೆ ಪ್ರತಾಪ ಬಿಸಿಯೂಟದ ಹಣವನ್ನು ಅನಧಿಕೃತವಾಗಿ ಡ್ರಾ ಮಾಡಿಕೊಂಡು, 2024-25ನೇ ಸಾಲಿನಲ್ಲಿ ನೋಂದಣಿಯಾದ ಮಕ್ಕಳನ್ನು ನಂ-1 ರಿಜಿಸ್ಟರ್‌ನಲ್ಲಿ ದಾಖಲಿಸದೇ ಲೋಪ ಎಸಗಿದ್ದಾರೆ ಎಂಬ ದೂರು ಬಂದಿತ್ತು. ಈ ಕುರಿತು ಪರಿಶೀಲಿಸಿದಾಗ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಪ್ರತಾಪ ಬಾರ್ಕಿ ಅವರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ, ಅಮಾನತುಗೊಳಿಸಲಾಗಿದೆ ಎಂದು ಬಿಇಒ ಮೌನೇಶ ಬಡಿಗೇರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net