

ಹಾವೇರಿ: ತಾಲೂಕಿನ ನೀರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಾವಸ್ಥೆಯಲ್ಲಿರುವ ನಾಲ್ಕು ಕೊಠಡಿಗಳ ಬದಲಾಗಿ ನೂತನ ನಾಲ್ಕು ಕೊಠಡಿಗಳನ್ನು ನಿರ್ಮಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಶಿಫಾರಸ್ಸು ಮಾಡಿದ್ದಾರೆ.
ಶಾಲೆಯ ಕೊಠಡಿಯೊಂದರ ಮೇಲ್ಛಾವಣಿ ಕುಸಿದು ಬಾಲಕನೊಬ್ಬ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಬಿಇಒ ಮೌನೇಶ ಬಡಿಗೇರ ಹಾಗೂ ತಂಡ ಆ.2ರಂದು ಬಾಲಕನ ನಿವಾಸಕ್ಕೆ ತೆರಳಿ ಬಾಲಕನ ಆರೋಗ್ಯ ವಿಚಾರಿಸಿದೆ. ಬಳಿಕ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿ ಡಿಡಿಪಿಐಗೆ ವರದಿ ಸಲ್ಲಿಸಿದೆ.
ಶಾಲೆಯ ಮೂರು ಕೊಠಡಿಗಳನ್ನು ತೆರವುಗೊಳಿಸಲು ಸೂಚಿಸಿದ್ದರೂ ತೆರವುಗೊಳಿಸಿರಲಿಲ್ಲ ಮಳೆಯಿಂದಾಗಿ ಗೋಡೆಗಳು ಬಿರುಕುಬಿಟ್ಟಿವೆ. ಪಿಆರ್‌ಡಿ ಇಲಾಖೆಯ ಎಇಇ ಉಮೇಶ ಅವರೊಂದಿಗೆ ಶಾಲಾ ಕೊಠಡಿಗಳನ್ನು ಪರಿಶೀಲಿಸಿದಾಗ ನಾಲ್ಕು ಕೊಠಡಿ ಮತ್ತು ಅಡುಗೆ ಕೋಣೆ ಹಾಳಾಗಿರುವುದು ಗೊತ್ತಾಗಿದೆ. ಹಾಗಾಗಿ, ಇವುಗಳಿಗೆ ಕೂಡಲೇ ಕೀಲಿ ಹಾಕಿ ಬಳಸದಂತೆ ಸೂಚಿಸಲಾಯಿತು. ನಾಲ್ಕು ಕೊಠಡಿ ನಿರ್ಮಾಣ ಹಾಗೂ ಪಿಎಂ ಪೋಷಣ ಅಭಿಯಾನದಡಿ ಅಡುಗೆ ಕೋಣೆ ನಿರ್ಮಿಸಲು ಕ್ರಮ ಜರುಗಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ವರದಿ ಸಲ್ಲಿಸಿರುವುದಾಗಿ ಬಿಇಒ ಮೌನೇಶ ಬಡಿಗೇರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ :
ಶಾಲೆಯ ಕೊಠಡಿಯೊಂದರಲ್ಲಿ ತರಗತಿಯಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿ ವಿನಾಯಕ ಎಂಬಾತನ ಕಾಲಿನ ಮೇಲೆ ಮೇಲ್ಛಾವಣಿಯ ಕಂಬ ಕುಸಿದು ಬಿದ್ದಿತ್ತು. ಪರಿಣಾಮ ಬಾಲಕನ ಕಾಲಿಗೆ ಗಾಯ ಆಗಿತ್ತು. ಕೂಡಲೇ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಸದ್ಯ ಬಾಲಕ ಸುಧಾರಣೆಗೊಂಡಿದ್ದು, ನಿತ್ಯವೂ ಡ್ರೆಸ್ಸಿಂಗ್ ಮಾಡಿಸುವಂತೆ ಬಿಇಒ ಸೂಚಿಸಿದ್ದಾರೆ.