

ಹಾವೇರಿ: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸುವುದು ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಹಾಗಾಗಿ, ದಾಖಲಾತಿ ಹೆಚ್ಚಳದ ಕುರಿತು ಗಮನ ಹರಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್ ಪಾಟೀಲ ಹೇಳಿದರು.
ನಗರದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ನಂ.2ರಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರ್.ಟಿ.ಇ. ಕಾಯ್ದೆ ಅಡಿಯಲ್ಲಿ ಉಚಿತ ಶಿಕ್ಷಣ, ಸರ್ಕಾರಿ ಶಾಲೆಗಳ 1ನೇ ತರಗತಿಯಿಂದ 10ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಏಕರೂಪ ಶಿಕ್ಷಣದ ಅವಕಾಶ ಕಲ್ಪಿಸಲು ಹಾಗೂ ಕುಟುಂಬಗಳ ಮೇಲೆ ಆರ್ಥಿಕ ಭಾರ ತಗ್ಗಿಸಲು ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು, ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಾಯ ಮಾಡಲು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಉಚಿತ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಶಿಷ್ಯವೇತನ ನೀಡಲಾಗುತ್ತಿದೆ ಹಾಗೂ ವಿಕಲಚೇತನ ಮಕ್ಕಳಿಗೆ ಸಮನ್ವಯ ಶಿಕ್ಷಣ ಯೋಜನೆ ಮೂಲಕ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದು ಹೇಳಿದರು.
ಅಟಲ್ ಟಿಂಕರಿಂಗ್ ಲ್ಯಾಬ್. ಇದು ಅಟಲ್ ಇನೋವೇಷನ್ ಮಿಷನ್ ಎಂಬ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿದ್ದು, ವಿದ್ಯಾರ್ಥಿಗಳಲ್ಲಿ ಆವಿಷ್ಕಾರಶೀಲತೆ, ವಿಜ್ಞಾನಾಭಿವೃದ್ಧಿ ಮತ್ತು ಡಿಜಿಟಲ್ ಯುಗದ ಕೌಶಲಗಳನ್ನು ಬೆಳೆಸಲು ಸಹಾಯಕವಾಗಿರುವ ಪ್ರಮುಖ ಯೋಜನೆಯಾಗಿದೆ ಎಂದರು.
ಮರು ಸಿಂಚನ ಕಾರ್ಯಕ್ರಮ ವಿದ್ಯಾರ್ಥಿಗಳ ಶಾಲಾ ಪಾಠಗಳನ್ನು ಅರ್ಥಮಾಡಿಕೊಳ್ಳದೇ ಹಿಂದುಳಿದಿದೆ. ನಿರೀಕ್ಷಿತ ಗುರಿ ತಲುಪಿಸಲು ರೂಪಿಸಿರುವ ಪೂರಕ ಶಿಕ್ಷಣ ಕಾರ್ಯಕ್ರಮವಾಗಿದೆ. ಆದರ್ಶ, ಶಾಲೆಗಳು, ಕಸ್ತೂರಿ ಬಾ ಶಾಲೆಗಳು ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳ ಮೂಲಕ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ರಾಣೆಬೆನ್ನೂರಿನ ಅಬುಸಾಲಿಯಾಖಾನ್ ಕುಲಕರ್ಣಿ ಪಾಸಾಗಿದ್ದಾರೆ. ಸರ್ಕಾರಿ ಶಾಲೆಗಳು ಮಕ್ಕಳಿಗೆ ಹೆಚ್ಚಿನ ಜೀವನ ಅನುಭವಗಳನ್ನು ನೀಡುತ್ತವೆ ಎಂದು ಹೇಳಿದರು.
ಡಯಟ್ ಉಪ ಪ್ರಾಚಾರ್ಯ ಝಡ್.ಎಂ ಖಾಜಿ ಮಾತನಾಡಿ, ಇನ್ಸ್‌ಪೈರ್ ಅವಾರ್ಡ್, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ನಡೆಸಲಾಗುವ ವಿಜ್ಞಾನ ಪ್ರತಿಭೆಗಳ ಅಭಿವೃದ್ಧಿಗಾಗಿ ರೂಪಿಸಲಾದ ರಾಷ್ಟ್ರೀಯ ಮಟ್ಟದ ಯೋಜನೆಯಾಗಿದೆ. ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಯೋಚನೆ, ನಾವೀನ್ಯತೆ ಮತ್ತು ಸಂಶೋಧನಾ ಚಟುವಟಿಕೆ ಉತ್ತೇಜನ ಮಾಡುತ್ತದೆ ಎಂದರು.
ಜ್ಞಾನದೀಪ್ತಿ ಅಂದರೆ ಎಲ್ಲ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆಂಗ್ಲ ಮಾಧ್ಯಮ ಆರಂಭಿಸುವುದಾಗಿದೆ. ಜ್ಞಾನಸುಧಾ ಕಾರ್ಯಕ್ರಮದಲ್ಲಿ ಆಯ್ದ 100 ಶಾಲೆಗಳಿಗೆ ತಲಾ 10 ಕಂಪ್ಯೂಟರ್ ನೀಡಲಾಗುತ್ತಿದೆ ಎಂದು ಹೇಳಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷೆ ಕವಿತಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಎಂ ಬೇವಿನಮರದ, ನಿಜಲಿಂಗಪ್ಪ ಬಸೇಗೆಣ್ಣಿ, ರಮೇಶ ಪೂಜಾರ, ರೇಖಾ ತೋಟಗೇರ, ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಇತರರು ಉಪಸ್ಥಿತರಿದ್ದರು. ಶಿಲ್ಪಾ ಉಜ್ಜಮ್ಮನವರ ನಿರೂಪಿಸಿದರು. ಎಂ.ಡಿ ಮಾದರ ಸ್ವಾಗತಿಸಿದರು.