

ಹಾವೇರಿ: ಪುತ್ರ ಕಾಂತೇಶಗೆ ಹಾವೇರಿ- ಗದಗ ಲೋಕಸಭಾ ಟಿಕೆಟ್ ಕೊಡಿಸಬೇಕು ಎಂದು ಓಡಾಡುತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಗನನ್ನು ಬಿಟ್ಟು ಜಿಲ್ಲೆಯ ವಾತಾವರಣ ಕೆಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ವಾಗ್ದಾಳಿ ನಡೆಸಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರು ಕಾಂಗ್ರೆಸ್‌ನಿಂದ ವಲಸೆ ಬಂದ ನಮ್ಮ ಬಗ್ಗೆ ಈ ಹಿಂದೆ ಮಾತನಾಡಿದ್ದಾರೆ. ಈ ಕುರಿತು ನಾನು ಕರೆ ಮಾಡಿ ಕೇಳಿದಾಗ, 'ನಾನು ಹಾಗೆ ಹೇಳಿಲ್ಲ. ಕ್ಷಮಿಸಿ' ಎಂದಿದ್ದರು. ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ವಿರೋಧ ಮಾಡಿದವರನ್ನು ಕರೆದುಕೊಂಡು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ ಎಂದು ನೇರವಾಗಿ ಆಕ್ರೋಶ ಹೊರಹಾಕಿದರು.
ಹಿರಿಯ ನಾಯಕರಾಗಿ ಈ ರೀತಿ ಮಕ್ಕಳಾಟದಂತೆ ಮಾಡಿದರೆ ಹೇಗೆ. ಪಕ್ಷದ ಉನ್ನತ ನಾಯಕರು ಸಮೀಕ್ಷೆ ಮಾಡುತ್ತಿದ್ದಾರೆ. ಯಾರು ಗೆಲ್ಲುವ ಅಭ್ಯರ್ಥಿ ಎಂಬುದನ್ನು ನೋಡಿ ಟಿಕೆಟ್ ಕೊಡುತ್ತಾರೆ. ಅವರಿಗೆ ಟಿಕೆಟ್ ಭರವಸೆ ಕೊಟ್ಟಿಲ್ಲ ಎಂದು ರಾಜ್ಯಾಧ್ಯಕ್ಷರೇ ಹೇಳಿದ್ದಾರೆ. ಹೀಗಿದ್ದರೂ ಮಗನಿಗಾಗಿ ಓಡಾಡೋದು ಯಾಕೆ. ಪಕ್ಷ ಹೇಳಿದಾಗ ಕ್ಷೇತ್ರಕ್ಕೆ ಹೋಗೋದರಲ್ಲಿ ಅರ್ಥವಿದೆ. ಹಾಗಾಗಿ, ಹಿರಿಯ ನಾಯಕರು ಒಡಕು ಇರುವ ಜಾಗದಲ್ಲಿ ನೀರು ಎರೆಯಬಾರದು. ಮೋದಿ ಅವರ ಹೆಸರಲ್ಲಿ ಎಂಪಿ ಚುನಾವಣೆ ನಡೆಯುತ್ತದೆ. ಯಾರ ಹೆಸರಲ್ಲೂ ನಡೆಯುವುದಿಲ್ಲ ಎಂದು ಕುಟುಕಿದರು.
ಕಾಂಗ್ರೆಸ್‌ನಲ್ಲಿ ಮೂರು ಗುಂಪುಗಳಾಗಿವೆ
ಕಾಂಗ್ರೆಸ್ ಪಕ್ಷದಲ್ಲಿ 136 ಶಾಸಕರಿದ್ದರೂ ಪರೇಶನ್ ಹಸ್ತಕ್ಕೆ ಹವಣಿಸುತ್ತಿರುವ ಕಾಂಗ್ರೆಸ್‌ನದ್ದು ಹಾಸ್ಯಾಸ್ಪದ ನಡೆಯಾಗಿದೆ. ಕಾಂಗ್ರೆಸ್‌ನಲ್ಲಿ ಯಾವುದೂ ಸರಿ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಅವರಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಹಾಗೂ ಪರಮೇಶ್ವರಯ್ಯ ಎಂಬ ಮೂರು ಗುಂಪುಗಳಾಗಿವೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಛೇಡಿಸಿದರು.
ನಾವು ಕಾಂಗ್ರೆಸ್ ಬಿಟ್ಟು ಬಾಂಬೆಗೆ ಹೋದಾಗ 'ಸೂರ್ಯ, ಚಂದ್ರ ಇರುವ ತನಕ 17 ಶಾಸಕರನ್ನು ಕರೆದುಕೊಳ್ಳುವುದಿಲ್ಲ' ಎಂದು ಸಿದ್ಧರಾಮಯ್ಯ ಹೇಳಿದ್ದರು. ಈಗ ಯಾಕೆ ಕರೆದುಕೊಳ್ಳುತ್ತಿದ್ದಾರೆ. ಅವರಿಗೆ ಅಭದ್ರತೆ ಕಾಡುತ್ತಿದೆ. ಎಸ್.ಟಿ. ಸೋಮಶೇಖರ ಮನಸ್ಸಿಗೆ ಬೇಸರವಾಗಿದೆ. ಅನುದಾನ ಕೇಳಲು ಸಿಎಂ ಅವರನ್ನು ಭೇಟಿಯಾಗಿದ್ದಾರೆ ಅಷ್ಟೇ. ಕಾಂಗ್ರೆಸ್‌ಗೆ ಹೋದರೂ ಅವರೇನು ಮಂತ್ರಿಯಾಗುವುದಿಲ್ಲ. ಯಾರೂ ನಮ್ಮ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಬಿ.ಸಿ. ಪಾಟೀಲ ವಿವರಿಸಿದರು.
ಪ್ರಕಾಶ ರಾಜ್ ಮೂರ್ಖತನದ ಹೇಳಿಕೆ
ಚಂದ್ರಯಾನದ ಬಗ್ಗೆ ನಟ ಪ್ರಕಾಶ ರಾಜ್ ವ್ಯಂಗ್ಯಭರಿತ ಟ್ವೀಟ್ ಒಂದು ಮೂರ್ಖತನದ ಹೇಳಿಕೆ. ಇಡೀ ವಿಶ್ವ ಭಾರತದ ಕಡೆ ನೋಡುತ್ತಿದೆ. ಇದು ಭಾರತದ ದೊಡ್ಡ ಸಾಧನೆ. ಈ ಮನುಷ್ಯ ಎಲ್ಲೋ ಕುಳಿತುಕೊಂಡು ಮಾತನಾಡುವುದು ಸರಿಯಲ್ಲ. ನಾವೆಲ್ಲರೂ ಚಂದ್ರಯಾನ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದೇವೆ. ಇಂತಹ ಹೇಳಿಕೆ ಸರಿಯಲ್ಲ ಎಂದರು.