

ಬ್ಯಾಡಗಿ: ರಾಷ್ಟ್ರೀಯ ಡೆಂಘೆ ದಿನಾಚರಣೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಬ್ಯಾಡಗಿಯಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಘವೇಂದ್ರಸ್ವಾಮಿ ಎಚ್.ಎಸ್. ಚಾಲನೆ ನೀಡಿದರು.
ಬ್ಯಾಡಗಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಹಾಗೂ ಬ್ಯಾಡಗಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ರಾಷ್ಟ್ರೀಯ ಡೆಂಘೆ ದಿನಾಚರಣೆ ಆಚರಿಸಲಾಯಿತು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಸರಿತಾ ಮಾತನಾಡಿ, ‘ಸಮುದಾಯದೊಂದಿಗೆ ಸೇರಿ ಡೆಂಘೆ ಜ್ವರವನ್ನು ನಿಯಂತ್ರಿಸೋಣ’ ಎಂಬ ಈ ವರ್ಷದ ಘೋಷ ವಾಕ್ಯದಂತೆ ಸಾರ್ವಜನಿಕರು ಸೊಳ್ಳೆಗಳ ಉತ್ಪಾದನೆ ತಡೆಯಲು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಡೆಂಘೆ ನಿಯಂತ್ರಣಕ್ಕೆ ಮುಂದಾಗಬೇಕು. ಸಮುದಾಯದಲ್ಲಿ ನಿರಂತರ ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಲಹೆ ನೀಡಿದರು.
ಸೊಳ್ಳೆಗಳ ನಿಯಂತ್ರಣಕ್ಕಾಗಿ ಪರಿಸರ ಸ್ವಚ್ಛತೆಗಾಗಿ ಅರಿವು ಮೂಡಿಸಲು ಜಾಥಾ ಮತ್ತು ಆಟೋ ಮೈಕಿಂಗ್ ಮೂಲಕ ಜಾಗೃತಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬ್ಯಾಡಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ, ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಚನ್ನಬಸಯ್ಯ ವಿರಕ್ತಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಕೋಟಿ, ಪುರಸಭೆ ಮಖ್ಯಾಧಿಕಾರಿ ವಿನಯಕುಮಾರ ಹೊಳಿಯಪ್ಪಗೌಡರ, ಬ್ಯಾಡಗಿ ಆರೋಗ್ಯ ಅಧಿಕಾರಿ ಡಾ.ಅರಾಪತ್ ಖಾಗದಗಾರ, ಆಡಳಿತ ವೈದ್ಯಾಧಿಕಾರಿ ಡಾ.ಪುಟ್ಟರಾಜ, ವೈದ್ಯಾಧಿಕಾರಿ ಡಾ.ಕಾಂತೇಶ ಭಜಂತ್ರಿ, ಡಾ.ಕೃಷ್ಣವೇಣಿ, ಡಾ.ಸುರೇಶ ಗುಂಡಪಲ್ಲಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಆರೋಗ್ಯ ಶಿಕ್ಷಣಾಧಿಕಾರಿ ಚನ್ನಪ್ಪ ಲಮಾಣಿ ಸ್ವಾಗತಿಸಿದರು. ಆರೋಗ್ಯ ನೀರಿಕ್ಷಣಾಧಿಕಾರಿ ಮಲ್ಲಿಖಾರ್ಜುನ ಸಿ.ಎಂ. ವಂದಿಸಿದರು.