

ಹಾವೇರಿ: ಬಸವಾದಿ ಶಿವಶರಣರ ಆಚಾರ, ವಿಚಾರ, ತತ್ವದ ಪ್ರಚಾರ ಹಾಗೂ ಅನುಷ್ಠಾನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸೆ.1ರಿಂದ ಅ. 5ರವರೆಗೆ ‘ಬಸವ ಸಂಸ್ಕೃತಿ ಅಭಿಯಾನ’ ಹಮ್ಮಿಕೊಳ್ಳಲಾಗಿದೆ. ಅಭಿಯಾನದ ಅಂಗವಾಗಿ ಸೆ.14ರಂದು ಹಾವೇರಿ ನಗರದ ರಜನಿ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.
ನಗದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣ ಅವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ವರ್ಷ ಪೂರ್ಣಗೊಂಡಿದೆ. ಇದರ ಅಂಗವಾಗಿ ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವ ಸಂಸ್ಕೃತಿ ಅಭಿಯಾನ ಸಮಿತಿ ವತಿಯಿಂದ ಈ ಅಭಿಯಾನ ಆಯೋಜಿಸಲಾಗಿದೆ ಎಂದರು.
ನಗರದ ರಜನಿ ಸಭಾಂಗಣದಲ್ಲಿ ಸೆ.14ರಂದು ಬೆಳಗ್ಗೆ 10 ಗಂಟೆಗೆ ಅಭಿಯಾನ ಸ್ವಾಗತಿಸಲಾಗುವುದು. 10.30ಕ್ಕೆ ಷಟಸ್ಥಲ ಧ್ವಜಾರೋಹಣ ನೆರವೇರಲಿದೆ. ಬೆಳಗ್ಗೆ 11 ಗಂಟೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ವಚನ ಸಂವಾದ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಬಸವ ಸಂಸ್ಕೃತಿ ಅಭಿಯಾನದ ಸಾಮರಸ್ಯದ ನಡಿಗೆ ಕಾರ್ಯಕ್ರಮವಿದ್ದು, ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಉದ್ಘಾಟಿಸುವರು ಎಂದು ತಿಳಿಸಿದರು.
ಸೆ. 14ರಂದು ಸಂಜೆ 6ಕ್ಕೆ ವೇದಿಕೆ ಕಾರ್ಯಕ್ರಮ ಜರುಗಲಿದೆ. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದೇವರು, ಸಾಣಿಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಂಬಳ ಗದಗ ತೋಂಟದಾರ್ಯ ಮಠದ ತೊಂಟದ ಸಿದ್ಧರಾಮ ಸ್ವಾಮೀಜಿ, ಕೂಡಲಸಂಗಮದ ಗಂಗಾ ಮಾತಾಜಿ, ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಇತರ ಮಠಾಧೀಶರೂ ಭಾಗವಹಿಸಲಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಎಸ್.ಎನ್.ಕೆಂಪಗೌಡ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಜನಪದ ಲೇಖಕ ಶಂಭು ಬಳಿಗಾರ ವೇಷಧಾರಿಗಳ ಕಂಡೆಡೆ ನಾಚಿತೆನ್ನ ಮನ, ಜನಪದದಲ್ಲಿ ಶರಣರು ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಶಿವಯೋಗಿ ಮಾಮಲೆಪಟ್ಟಣಶೆಟ್ಟಿ, ಎಸ್.ಎನ್.ಕೆಂಪಗೌಡ್ರ, ಕಿರಣ ಕೊಳ್ಳಿ, ಅಶೋಕ ಮಾಗನೂರ, ಆನಂದ ಅಠವಾಳಗಿ, ವಿ.ಜಿ.ಯಳಗೇರಿ, ಪರಮೇಶಪ್ಪ ಮೇಗಳಮನಿ, ಶಿವಬಸಪ್ಪ ಮುದ್ದಿ, ಮಲ್ಲಿಕಾರ್ಜುನ ಹಿಂಚಿಗೇರಿ, ಗಂಗಾಧರ ಮಾಸೂರ, ಮುರಿಗೆಪ್ಪ ಕಡೆಕೊಪ್ಪ, ಶಿವಬಸಪ್ಪ ಅರಳೇಶ್ವರ, ಮೃತ್ಯುಂಜಯ ಮಹಾರಾಜಪೇಟೆ, ಬಸವರಾಜ ಮುಳುಗುಂದ, ಇತರರಿದ್ದರು.
‘ಜಂಗಮದೆಡೆಗೆ’ ನಾಟಕ ಪ್ರದರ್ಶನ
ಅಂದು ರಾತ್ರಿ 8.30ಕ್ಕೆ ಸಾಣಿಹಳ್ಳಿಯ ಶಿವ ಸಂಚಾರ ತಂಡದಿಂದ ‘ಜಂಗಮದೆಡೆಗೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೊಸಮಠದ ಶ್ರೀಗಳು ತಿಳಿಸಿದರು.