

ಹಾವೇರಿ: ಶರಣರು ಮನೋವಿಜ್ಞಾನವನ್ನು ಬಲ್ಲವರಾಗಿದ್ದು, ಶಿವಯೋಗದ ಮೂಲಕ ಆತ್ಮ ನಿರೀಕ್ಷಣೆಯನ್ನು ಮಾಡಿ ಉನ್ನತಿಯನ್ನು ಸಾಧಿಸಿದ್ದರು ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು
ನಗರದ ಕೆ.ಎಂ.ಬಿಜಾಪುರ ನಿವಾಸದಲ್ಲಿ ಶನಿವಾರ ಬಸವ ಬಳಗ ಮತ್ತು ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದ ಪ್ರಾರಂಭೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಿತ್ಯ ಮಾಡುವ ಲಿಂಗ ಪೂಜೆ, ಮಂತ್ರ ಪಠಣ, ವಚನ ಪಠಣಗಳು ಸದ್ಗತಿಯ ಸಾಧನಗಳಾಗಿವೆ. ಆಹಾರ ಸೇವಿಸುವಾಗ ಭಗವಂತನ ಸ್ಮರಣೆ ಮಾಡುತ್ತ ಸೇವಿಸಿದರೆ ಅದು ಪ್ರಸಾದವಾಗುತ್ತದೆ. ಶರಣ ತತ್ವಗಳ ಅನುಷ್ಠಾನದಿಂದ ನಮ್ಮ ಕಾಯವೇ ಕೈಲಾಸವಾಗುತ್ತದೆ ಎಂದರು.
ಕೂಡಲದ ಗುರು ನಂಜೇಶ್ವರ ಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾವುಗಳು ಅನುಭವ ಮಂಟಪವನ್ನು ಕಣ್ಣಾರೆ ನೋಡಿಲ್ಲ. ಆದರೆ, ಶರಣರ ಬದುಕು ಬರಹ ಮತ್ತು ವಚನಗಳ ಚಿಂತನ ಮಂಥನಗಳ ಕಾರ್ಯಗಳನ್ನು ಮೇಲಿಂದ ಮೇಲೆ ಮಾಡುವುದರ ಮುಖೇನ ಅನುಭವ ಮಂಟಪ ಕಾಣಬಹುದಾಗಿದೆ ಎಂದರು.
ಬಹಿರಂಗದ ಬದಲಾವಣೆಯೊಂದಿಗೆ ನಮ್ಮ ಅಂತರಂಗದ ಬದಲಾವಣೆ ಕೂಡ ಆಗಬೇಕಾಗಿದ್ದು. ಶರಣರ ವಚನಗಳ ಸತತ ಅಭ್ಯಾಸದಿಂದ ಇದು ಸಾಧ್ಯವಾಗಲಿದೆ. ಮಕ್ಕಳ ಮನಸ್ಸಿನಾಳಕ್ಕೆ ವಚನಗಳನ್ನು ನೀಡುವುದು ಇಂದಿನ ಅವಶ್ಯಕತೆ ಆಗಿದೆ ಎಂದರು.
ಚಿಕ್ಕಬಾಸೂರ ಪದವಿ ಕಾಲೇಜ್ ಪ್ರಾಧ್ಯಾಪಕಿ ಪುಷ್ಪಾವತಿ ಶಲವಡಿಮಠ ಮಾತನಾಡಿ, ಪ್ರಸ್ತುತ ಬೌದ್ಧಿಕ ಕಟ್ಟಡಗಳನ್ನು ಕಟ್ಟುವುದರ ಬದಲಾಗಿ ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕಿದೆ ಎಂದರು.
ಸಾಧಕರಿಗೆ ಸನ್ಮಾನ ಮಾಡಲಾಯಿತು. ಬಸವ ಬಳಗದ ಅಧ್ಯಕ್ಷ ಅಧ್ಯಕ್ಷ ವಿ.ಜಿ.ಯಳಗೇರಿ, ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಪಿ.ಡಿ.ಶಿರೂರ, ಮಹೇಶ ಹಾವೇರಿ, ವೀರೇಶ ಮತ್ತಿಹಳ್ಳಿ,ನಾಗರಾಜ ಕುರುವತ್ತೇರ, ನಿಂಗಪ್ಪ ಪೂಜಾರ, ಶಂಕರ ಬಿಸರಳ್ಳಿ, ಕಿರಣ ಕೊಳ್ಳಿ, ಮಲ್ಲಿಕಾರ್ಜುನ ಅಗಡಿ, ಎಂ.ಬಿ.ಕಾಳೆ, ಪ್ರಭುಗೌಡ ಬಸನಗೌಡ, ಹೊಳೆಯಪ್ಪ ಸೂರದ, ಶಿವಣ್ಣ ಶಿರೂರ, ವಿರುಪಾಕ್ಷಪ್ಪ ಬಣಕಾರ, ಪ್ರಕಾಶ ಶೆಟ್ಟಿ, ಶಿವಬಸಪ್ಪ ಮುದ್ದಿ, ಬಸವರಾಜ ಓಂಕಾರಣ್ಣವರ, ಚಂಪಾವತಿ ವಿಜಾಪುರ, ಲಲಿತಕ್ಕ ಹೊರಡಿ, ಅಮೃತಮ್ಮ ಶೀಲವಂತರ, ಚಂಪಾ ಹುಣಸಿಕಟ್ಟಿ, ಮಹದೇವಿ ಕಣವಿ, ಇತರರು ಉಪಸ್ಥಿತಿರಿದ್ದರು.
ಕಾವ್ಯಾ ಅಂಗಡಿ, ಶಶಿಕಲಾ ಕಾಯಕದ ವಚನ ಪ್ರಾರ್ಥನೆ ಮಾಡಿದರು. ಅಕ್ಕಮಹಾದೇವಿ ವಿಜಾಪುರ ಸ್ವಾಗತಿಸಿದರು. ಬಳಗದ ಕಾರ್ಯದರ್ಶಿ ಜಗದೀಶ ಹತ್ತಿಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಕೆ.ಎಂ ಬಿಜಾಪುರ ವಂದಿಸಿದರು.