ಅಪೌಷ್ಠಿಕತೆಯಿಂದ ಬಳಲುವವರಿಗೆ ಹಾಲು ಕೊಡಿ; ಬಸವ ಬಳಗದಿಂದ ಬಸವ ಪಂಚಮಿ ಆಚರಣೆ

10 HVR 8
Published on

ಹಾವೇರಿ: ಹಬ್ಬಗಳು ಮನುಷ್ಯನ ಪ್ರಗತಿಗೆ ಪೂರಕವಾಗಿದ್ದರೂ ಕೆಲವು ಆಚರಣೆಗಳು ಮೂಢನಂಬಿಕೆಗೆ ಪ್ರಚೋದನೆ ನೀಡುತ್ತಿವೆ. ಇದನ್ನು ಹೋಗಲಾಡಿಸಲು ನಾಗರ ಪಂಚಮಿಯಂದು ಬಸವ ಬಳಗದಿಂದ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಬಸವ ಪಂಚಮಿಯನ್ನಾಗಿ ಆಚರಿಸಲಾಗುತ್ತಿದೆ ಎಂದು ಶಿವಯೋಗಿ ಬೆನ್ನೂರು ಹೇಳಿದರು.
ನಗರದ ನಾಗೇಂದ್ರನಮಟ್ಟಿಯ ಸರ್ಕಾರಿ ಶಾಲೆ-8ರಲ್ಲಿ ಬಸವಬಳಗದಿಂದ ವಚನ ಶ್ರಾವಣ ನಿಮಿತ್ಯ ಗುರುವಾರ ಆಯೋಜಿಸಿದ್ದ ಬಸವಪಂಚಮಿ ವಿದ್ಯಾರ್ಥಿಗಳಿಗೆ ಹಾಲು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುತ್ತಕ್ಕೆ ಹಾಲು ಸುರಿದು ಅವೈಜ್ಞಾನಿಕವಾಗಿ ಆಚರಣೆಗೆ ಜನರು ಮುಂದಾಗುತ್ತಾರೆ. ಇದರಿಂದ ಅಪಾರ ಪ್ರಮಾಣ ಹಾಲು ವ್ಯರ್ಥವಾಗುತ್ತಿದೆ. ನಮ್ಮ ರಾಜ್ಯವೊಂದರಲ್ಲೇ ಪ್ರತಿ ವರ್ಷ ಅಪೌಷ್ಠಿಕತೆಯಿಂದ ಸಾವಿರಾರು ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಹಾಲನ್ನು ವ್ಯರ್ಥ ಮಾಡುವ ಬದಲಿಗೆ ಇಂತಹ ಮಕ್ಕಳಿಗೆ ಮತ್ತು ರೋಗಿಳಿಗೆ ಕೊಟ್ಟರೆ ಅವರ ಆರೋಗ್ಯ ಸುಧಾರಿಸುತ್ತದೆ ಎಂದರು.
ದಾನಮ್ಮದೇವಿ ಟ್ರಸ್ಟ್ ಅಧ್ಯಕ್ಷೆ ಶೋಭಾತಾಯಿ ಮಾಗಾವಿ ಮಾತನಾಡಿ, ಅರ್ಥಪೂರ್ಣವಾಗಿ ಹಬ್ಬ ಆಚರಿಸುತ್ತಿರುವುದು ಬದಲಾವಣೆಯ ಸಂಕೇತವಾಗಿದೆ. ಎಲ್ಲರೂ ಮೂಢನಂಬಿಕೆಯಿಂದ ಹೊರಬರಬೇಕು ಎಂದು ಹೇಳಿದರು.
ಜಯಶ್ರೀ ಶಿವಪುರ ಮಾತನಾಡಿ, ಮಹಾಮಾನವತಾವಾದಿ, ಸಕಲ ಜೀವಾತ್ಮರಿಗೆ ಲೇಸನೆ ಬಯಸಿದ ವಿಶ್ವಗುರು ಬಸವಣ್ಣನವರು ಶ್ರಾವಣ ಶುದ್ಧ ಪಂಚಮಿಯಂದು ಉರಿಯುಂಡ ಕರ್ಪೂರದಂತೆ ಮಹಾಬಯಲಿನಲ್ಲಿ ಬಯಲಾದರು. ಆ ಮಹಾಗುರುವಿನ ಸ್ಮರಣೆಯ ನಿಮಿತ್ತ ಬಸವಭಕ್ತರು ಈದಿನವನ್ನು ಬಸವಪಂಚಮಿ ಎಂದು ಆಚರಿಸುತ್ತಾರೆ. ಪ್ರತಿಯೊಬ್ಬರೂ ನಿತ್ಯಶರಣ ವಚನ ಪಠಣ ಮಾಡುವ ಮೂಲಕ ಶರಣರ ಹಾದಿಯಲ್ಲಿ ನಡೆಯಬೇಕೆಂದರು,
ಅಧ್ಯಕ್ಷತೆ ವಹಿಸಿದ್ದ ಚನ್ನಬಸವಣ್ಣ ರೊಡ್ಡನವರ ಮಾತನಾಡಿ, ಹಾವು ಹಾಲು ಕುಡಿಯುವುದಿಲ್ಲ. ಹಾಗಾಗಿ, ವ್ಯರ್ಥವಾಗಿ ಹಾಲು ಎರೆಯುವ ರೋಗಿಗಳಿಗೆ, ಮಕ್ಕಳಿಗೆ ಹಾಲು ವಿತರಿಸಿದರೆ ರೋಗಿಗಳಿಗೂ, ಮಕ್ಕಳಿಗೂ ಹಿತವಾಗುತ್ತದೆ ಎಂದರು.
ಸಮಾರಂಭದಲ್ಲಿ ಮಲ್ಲೇಶಪ್ಪ ಪಟ್ಟಣಶೆಟ್ಟಿ, ಮುರುಗೆಪ್ಪ ಕಡೇಕೊಪ್ಪ, ಕೆ.ಎಂ.ಬಿಜಾಪುರ, ಉಳಿವೆಪ್ಪ ಪಂಪಣ್ಣನವರ, ಮಾಲತೇಶ ಕರಿದ್ಯಾಮಣ್ಣನವರ, ಎಸ್.ಸಿ.ಹೊಸಮನಿ, ಗಂಗಣ್ಣ ಮಾಸೂರ, ಮತ್ತಿತರರು ಭಾಗವಹಿಸಿದ್ದರು. ಶಿವಬಸಪ್ಪ ಮುದ್ದಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಎನ್.ಎಸ್.ಕೋಳಿನಿಂಗಣ್ಣನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net