

ಹಾವೇರಿ: ಬಟ್ಟೆ ಆಭರಣಗಳಿಂದ ಮನುಷ್ಯನಿಗೆ ಗೌರವ ಸಿಗುವುದಿಲ್ಲ. ಮನುಷ್ಯನಿಗೆ ಕಿಮ್ಮತ್ತು ಇರುವುದಿಲ್ಲ. ಅವರಲ್ಲಿ ಇರುವ ಸದ್ಗುಣಗಳಿಂದ ಕಿಮ್ಮತ್ತು ಜಾಸ್ತಿ ಆಗುತ್ತದೆ. ಸದ್ಗುಣವಂತರಾಗಬೇಕು. ಕೈ ಕಾಲು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಬೇಕು. ತಂದೆ ತಾಯಿ ಮಕ್ಕಳು ಮನೆಗೆ ದುಡಿದು ಬರಬೇಕು ಕುಡಿದು ಬರಬಾರದು ಎಂದು ಆಪೇಕ್ಷೆ ಬೇಡುತ್ತಾರೆ. ದೇಹದೊಳಗೆ ಏನು ಹಾಕಬೇಕು ಅದನ್ನೇ ಹಾಕಬೇಕು ಎಂದು ಕೊಪ್ಪಳದ ಗವಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಬಸಾಪುರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಇಪ್ಪಿಕೊಪ್ಪ ಆಲದಮ್ಮ ದೇವಿ ಹಾಗೂ ಆಲದಮ್ಮದೇವಿ ಜಾತ್ರಾ ಮಹೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಯಾವುದೇ ಎಲೆಕ್ಟ್ರಾನಿಕ್ ವಸ್ತು ತೆಗೆದುಕೊಂಡರೂ ಅದನ್ನು ಹೇಗೆ ಉಪಯೋಗ ಮಾಡಬೇಕು ಎಂಬುದರ ಬಗ್ಗೆ ಮ್ಯಾನುವಲ್ ಕೊಡುತ್ತಾರೆ. ನಮ್ಮ ದೇಹ 100 ವರ್ಷ ಬಾಳುತ್ತದೆ. ಅದನ್ನು ಹೇಗೆ ಸದ್ಬಳಕೆ ಮಾಡಬೇಕು ಎಂಬುದು ಗೊತ್ತಿರಬೇಕು. ಪುಕ್ಕಟೆ ನೀರು, ಗಾಳಿ, ಬೆಳಕು, ಅದ್ಭುತವಾದ ದೇಹವನ್ನು ದೇವರು ಕೊಟ್ಟಿದ್ದಾನೆ. ಅದು ವ್ಯರ್ಥ ಆಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮನುಷ್ಯ ಎಂದು ಹುಟ್ಟುತ್ತಾನೋ ಅಂದು ಸಾವು ಕೂಡ ಆರಂಭವಾಗುತ್ತೆ. ಸರ್ಟಿಫಿಕೆಟ್ ಒಳಗ ಡೆಟ್ ಆಫ್ ಬರ್ತ್ ನೋಡುತ್ತೇವೆ. ಅದರ ಮುಂಚೆಯೇ ಡೆಟ್ ಆಫ್ ರೈಟ್ ಇರುತ್ತೆ. ಸಾವು ಅಂದರೆ ಮನುಷ್ಯನಿಗೆ ಭಯ ಯಾಕೆ ಆಗುತ್ತದೆ. ಹುಟ್ಟು ಸಾವು ಬೇರ್ಪಡಿಸಲು ಸಾಧ್ಯವೇ ಇಲ್ಲ. ಭೂಮಿ ಮೇಲೆ ಕಟ್ಟಿದ ಮನೆ ಬೀಳಲೇ ಬೇಕು, ಹಚ್ಚಿದ ದೀಪ ಆರಲೇ ಬೇಕು, ಅರಳಿದ ಹೂವು ಬಾಡಲೇ ಬೇಕು. ಅದನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ, ಇದು ನಿಸರ್ಗದ ನಿಯಮ ಎಂಬುದನ್ನು ಮರೆಯಬಾರದು ಎಂದರು.
ಮನುಷ್ಯ ಗಳಿಸಿದ ಸಂಪತ್ತು ಹೇಗಿರಬೇಕು ಅಂದ್ರೆ ಗಂಟು ಕಟ್ಟಿ ಬಯಲೊಳಗೆ ಇಟ್ಟರೂ ಯಾರು ಮುಟ್ಟಬಾರದು. ಅಂತ ಸಂಪತ್ತು ಗಳಿಸಬೇಕು. ಭೂಮಿಗೆ ಬರುವಾಗ ಬರೀ ಕೈಲಿ ಬಂದ್ವಿ, ಹೋಗುವಾಗ ಯಾವ ಸಂಪತ್ತು ಬರುವುದಿಲ್ಲ. ದುಡ್ಡು, ಅಧಿಕಾರ, ಆಸ್ತಿ ಯಾವುದೂ ಇಲ್ಲ. ಅಣ್ಣತಮ್ಮರು ಪಾಲು ಕೇಳಬಾರದು, ಸರ್ಕಾರ ಟ್ಯಾಕ್ಸ್ ಹಾಕಬಾರದು ಅಂತ ಸಂಪತ್ತು ಯಾವುದು ಎಂದರೆ ಅದು ಪಯಣ್ಯದ ಸಂಪತ್ತು ಎಂದರು.
ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಲದಮ್ಮ ದೇವಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕೊಂಪೆಯೊಳಗೆ ಹಂಪಿ ನಿರ್ಮಾಣ
ಆಲದಮ್ಮ ದೇವಿ ದೇವಸ್ಥಾನ ನೋಡಿದರೆ ಆಶ್ಚರ್ಯ ಎನಿಸುತ್ತಿದೆ. ಗುಡಿ, ವಿನ್ಯಾಸ, ಗೋಪುರ ಹಂಪಿ ನೋಡಿದಷ್ಟು ಖುಷಿಯಾಗುತ್ತದೆ. ಬಸಾಪುರ ಎಂಬ ಕೊಂಪೆಯೊಳಗ ಹಂಪಿ ನಿರ್ಮಾಣ ಮಾಡಿದ್ದಾರೆ. ಹಳ್ಳಿ ರೈತರು ದೇವಸ್ಥಾನ ಕಟ್ಟಿಸಿದ್ದು, ತಾಜಮಹಲ್ ಕಟ್ಟಿದಂತಾಗಿದೆ. ಯುವಕರೇ ಊರಿನ ನಿಜವಾದ ವೈಭವ. ಯುವಕರು, ಹಿರಿಯರು ಜಾತಿ ಧರ್ಮ ಬಿಟ್ಟು ಊರಿನ ಹಿತಕ್ಕೆ ದುಡಿಯುತ್ತಾರೆ. ಅದು ಮೆಚ್ಚುವಂತಹ ಕಾರ್ಯವಾಗಿದೆ ಎಂದು ಗವಿಸಿದ್ದೇಶ್ವರ ಶ್ರೀಗಳು ಶ್ಲಾಘಿಸಿದರು.